ಸಮಗ್ರ ಜ್ಞಾನ ಆವಿರ್ಭಾವ
ಎಲ್ಲಾ 18 ತಿರುಕ ಸಂಹಿತಾ ಸಂಚಿಕೆಗಳ ಲೇಖಕರು: ಬ್ರಹ್ಮ ಋಷಿ ಕೆ. ಎಸ್. ನಿತ್ಯಾನಂದ ಸ್ವಾಮೀಜಿ (ತಿರುಕ)
Vol 1, 52 Pages, ಸೆಪ್ಟೆಂಬರ್ 2009 – ಸಾಮ, ದಾನ, ಭೇದ ನೀತಿಗಳು:
ಈ ಪುಸ್ತಕ ಒಂದು ವಿಶೇಷ. ಕೇವಲ ಮೂರು ಅಥವಾ ಆರು, ಏಳು ಪದ್ಯಗಳಲ್ಲಿ ಒಂದು ಸಮಸ್ಯೆಯನ್ನು ಬಿಡಿಸುವ ಒಂದು ವಿಶೇಷ ರೀತಿಯ ಪದ್ಯ ರಚನೆಯಾಗಿರುತ್ತದೆ. ಇದು ಅಗ್ನಾ ವೈಷ್ಣವೀ ಯಾಗದ ಅಂಗವಾಗಿ ನಡೆದ ಪ್ರಕ್ರಿಯೆಯಲ್ಲಿ ಬಂದ ಉತ್ತರರೂಪದ ಸಮಸ್ಯಾ ಪರಿಹಾರವಾಗಿರುತ್ತದೆ. ಇದನ್ನು ಸೂಕ್ಷ್ಮ ರೀತಿಯಲ್ಲಿ ಹೇಳಲಾಗಿದೆ. ಒಂದು ರೀತಿಯ ಗಮಕಪದ್ಯ ರೂಪದಲ್ಲಿ ಬರೆಯಲಾಗಿದೆ. ಛಂದೋ ಬದ್ಧತೆಗಳೇನೂ ಇಲ್ಲ. ವಿಷಯ ಮಾತ್ರ ಪ್ರಧಾನವೆಂದು ಹಲವಾರು ಬಾರಿ ಓದಿ ಅರ್ಥಮಾಡಿಕೊಂಡು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ಖಂಡಿತ ಶುಭ ಫಲಪ್ರದ. ಇದರಲ್ಲಿ ಸದ್ಯೋಕಾಲೀನ ಸಮಸ್ಯಾ ನಿರೂಪಣೆ ಮಾಡಿ ವೇದೋಕ್ತ ಕರ್ಮಗಳನ್ನು ಆಧರಿಸಿ ಪರಿಹಾರ ಚಿಂತನೆ ಮಾಡಲಾಗಿ ಪ್ರತೀ ಸಮಸ್ಯೆಗೂ ಉತ್ತರರೂಪದಲ್ಲಿ ಈ ವಿಚಾರ ಬಂದಿರುತ್ತದೆ. ಇದೊಂದು “ಪಂಚತಂತ್ರ ರೀತಿಯ ಕಥೆಗಳು” ನಿಮಗೆ ಪರಿಚಯ ಇರಬಹುದು. ಅದರಲ್ಲಿ ಕಾಗೆ, ಗೂಗೆ, ನರಿ, ಮೊಸಳೆ, ಮಂಗ ಇತ್ಯಾದಿ ಪ್ರಾಣಿಗಳನ್ನು ಆಧರಿಸಿ ಕಥಾ ನಿರೂಪಣೆ ಇದ್ದರೂ ಅರ್ಥಮಾಡಿಕೊಂಡ ಮಾನವ ಪ್ರಬುದ್ಧನಾಗಬಲ್ಲ. ಹಾಗೆಯೇ ಈ ಪದ್ಯರೂಪಕಗಳಿವೆ. ನಿಮಗಿಷ್ಟವಾದಲ್ಲಿ ಓದಿ. ಯಾರಿಗೆ ಬೇಕಾದರೂ ಓದಿ ಹೇಳಿ, ಹೇಗೆ ಬೇಕಾದರೂ ಬಳಸಿ. ಇದರಲ್ಲಿ ಯಾವುದೇ ಯಾರದೆ ನಿಂದನೆ ಇಲ್ಲವೆಂದು ಘೋಷಿಸುತ್ತಾ ಈ ಪದ್ಯ ಲೇಖನ ಮೊದಲನೆಯ ಸಂಪುಟ ನಿಮಗೆ ಅರ್ಪಿಸುತ್ತಿದ್ದೇನೆ. – ತಿರುಕ
Vol 2, 52 Pages, ಅಕ್ಟೋಬರ್ 2009 – ಮಹಾವ್ಯಾಧ ಶಭಿಯ ಚರಿತ್ರೆ
ಶಿಭಿಯೆಂಬ ಒಬ್ಬ ಚಕ್ರವರ್ತಿಯ ಕಥೆಯಿಂದ ಆರಂಭಿಸಿ ಮುಂದಿನ ಕಲ್ಪದ ಅಧಿಕಾರಿಯ ವಿಚಾರ ಪ್ರಚುರ ಪಡಿಸಲಾಗಿದೆ. ಈಗಿರುವ ಶ್ವೇತವರಾಹ ಕಲ್ಪ ಕಳೆದು ಬ್ರಾಹ್ಮ, ಪ್ರಲಯ ಕಲ್ಪ ನಂತರ ಪ್ರಲಯವಾಗದಂತೆ ತಡೆದು ಪ್ರಕೃತಿಯಲ್ಲಿ ಋತುದೇವನ ಸಹಯೋಗದಿಂದ ಹೊಸ ಕಲ್ಪ, ಹೊಸ ರೂಪವನ್ನು, ಹೊಸ ಹೊಸದೇನನ್ನೋ ಸೃಷ್ಟಿಸುವ ಇರಾದೆಯಿಂದ ತುಂಬು ಸಂಕಲ್ಪ ಶಿಭಿಯು ಸಿದ್ಧನಾಗಿದ್ದಾನೆ. ಮುಂದಿನ ಕಲ್ಪದಲ್ಲಿ ಸಕಲ ಜೀವರಾಶಿಯ ರಕ್ಷಣಾ ಜವಾಬ್ದಾರಿಯನ್ನು ಹೊತ್ತು ವರಾಹ, ಬ್ರಾಹ್ಮ, ಪ್ರಲಯಕಲ್ಪದಲ್ಲಿ ತನಗೆ ಬೇಕಾದ ಅಗತ್ಯ, ಅನಿವಾರ್ಯ ಮಾರ್ಪಾಡುಗಳನ್ನು ಮಾಡುತ್ತಾ ಧ್ರುವತಾರೆಯ ಸಮೀಪದಲ್ಲಿ ಸ್ಥಿರ, ಶಾಶ್ವತವೂ, ಆಪ್ಯಾಯಮಾನವೂ ಆದ ಯುಗಧರ್ಮ ಕಲ್ಪ ನಿರೂಪಣೆಯಲ್ಲಿ ತೊಡಗಿರುವ ಮಹಾವ್ಯಾಧನೆಂಬ ಶಿಭಿಯ ಚರಿತ್ರೆಯೇ ಈ ವಿಚಾರವಾಗಿರುತ್ತದೆ. ಓದಿ ಆನಂದಿಸಿ, ಓದಿ ಅರ್ಥಮಾಡಿಕೊಳ್ಳಿರಿ, ಓದಿ ಜೀರ್ಣಿಸಿಕೊಳ್ಳಿರಿ, ಓದಿ ಜಿಜ್ಞಾಸುಗಳಾಗಿ, ಓದಿ ಜ್ಞಾನಿಗಳಾಗಿರಿ, ಓದಿ ಕಲ್ಪಾಂತದಲ್ಲಿ ಶಿಭಿಯೊಂದಿಗೆ ಕೈಗೂಡಿಸಿರೆಂದು ಹಾರೈಸುತ್ತೇನೆ.
Vol 3, 60 Pages, ನವೆಂಬರ್ 2009 – ತಾನು ಮಾಡಿದ ನಾಶವನ್ನು ತಾನೇ ಸರಿಪಡಿಸಬೇಕು – ಮಂಡೂಕ ಮಹರ್ಷಿಗಳು.
ಪ್ರಕೃತಿಯಲ್ಲಿರುವ ಪ್ರತೀ ಚರಾಚರ ವಸ್ತುಗಳ ಇರುವಿಕೆಯ ಮೂಲ ಉದ್ದೇಶವನ್ನರಿಯದೆ ಅದಕ್ಕಾದ ಅಪಚಾರ ಅಥವಾ ಅದರಿಂದಾದ ಸಮಸ್ಯೆಗಳ ಬಗ್ಗೆ ಯಾವ ಸಂಶೋಧನೆ ಮಾಡಿದರೂ ಅದು ಕೇವಲ ತಾತ್ಕಾಲಿಕವಾದ ಪ್ರಯೋಜನ ಸಿಗಬಹುದಾಗಿದೆ. ನಂತರ ಅದೇ ಸಂಶೋಧನೆ ಇನ್ನೊಂದು ಬಿಡಿಸಲಾಗದ ಸಮಸ್ಯೆಯನ್ನು ತಂದು ಒಡ್ಡುತ್ತಿದೆ ಈ ಕಾಲದಲ್ಲಿ, ಯಾವ ವಿಜ್ಞಾನಿಗಳು ಪರಿಪೂರ್ಣ ಸಂಶೋಧನೆ ಮಾಡಿ ಇದಮಿತ್ಥಂ ಎಂದು ಉತ್ತರ ನೀಡಲು ಸಾಧ್ಯವೇ ಇಲ್ಲ. ಕಾರಣ ಒಂದು ಸಮಸ್ಯೆ ಉದ್ಭವಿಸಿದೆ ಎಂದರೆ ಅದಕ್ಕೆ ನೂರಾರು ಸಾವಿರಾರು ವರ್ಷಗಳ ಹಿನ್ನೆಲೆ ಇರಬಹುದು, ಅಷ್ಟು ಹಿಂದಿನ ಸಮಸ್ಯೆಯನ್ನು ಪರಿಪೂರ್ಣವಾಗಿ ಸಂಶೋಧನೆ ಮಾಡುವಷ್ಟು ಕಾಲ ಈಗಿನ ವಿಜ್ಞಾನಿಗಳು ಬದುಕೇ ಇರುವುದಿಲ್ಲ. ಕಾರಣ ಆಧುನಿಕ ವಿಜ್ಞಾನದ ಮಾರ್ಗದ ಮಿತಿ.
ಆದರೆ ವೇದ ಮಾರ್ಗದಲ್ಲಿ ಸಂಶೋಧನೆ ಮಾಡಿದರೆ ಎಷ್ಟು ಲಕ್ಷ ವರ್ಷಗಳ ಕಾಲವಾದರೂ ಪರಿಪೂರ್ಣ ಸಂಶೋಧನೆ ಮಾಡಿ ಸಾಧಕ ಬಾಧಕಗಳನ್ನು ತಿಳಿದು ಉತ್ತಮವಾದದನ್ನು ಸಮಾಜಕ್ಕೆ ನೀಡುವವರೆಗೂ ಬದುಕಿರಬಹುದು ಎನ್ನುವುದಕ್ಕೆ ತಾನು ಮಾಡಿದ ತಪ್ಪಿನಿಂದ ಆದ ಅನಾಹುತವನ್ನು ಸರಿಪಡಿಸಿ ನೀಡುವುದಕ್ಕೆ ಕಲ್ಪಗಳ ಕಾಲ ಅಧ್ಯಯನ ನಡೆಸಿ ಯಾಗ ಸೂತ್ರಗಳನ್ನು ರಚಿಸಿ, ಇಂದಿಗೂ ಅತೀ ಶ್ರೇಷ್ಠವಾಗುವಂತೆ ಸಮಾಜಕ್ಕೆ ಸಾಕ್ಷಿಯಾಗಿ ನೀಡಿದ ಮಹರ್ಷಿಗಳೆಂದರೆ ಮಂಡೂಕ ಮಹರ್ಷಿಗಳು.
ವಿಜ್ಞಾನಿ ಡಾರ್ವಿನ್ ತನ್ನ ಸೃಷ್ಟಿಯ ಮೂಲ ಹುಡುಕುತ್ತಾ ಹೋಗಿ ತಾನು ಮಂಗನಿಂದ ಮಾನವನಾದೆ ಎಂದು ತನ್ನ ವಿಜ್ಞಾನದ ಮಿತಿಯಲ್ಲಿ ತಿಳಿದು ಪ್ರಪಂಚಕ್ಕೆ ಸಾರಿದ ಮಂಗನಿಂದ ಮಾನವನೆಂದು.
ಆದರೆ ಸೃಷ್ಟಿಯ ಆದಿಯಲ್ಲಿ ಮುಖ, ತಲೆ, ಕೈ, ಕಿವಿ ಇವೆಲ್ಲವೂ ಭಿನ್ನ ಭಿನ್ನವಾಗಿ ಅವರವರ ವರ್ತನೆ, ಗುಣ, ಶೀಲಗಳಿಗೆ ಹೊಂದಿ ಗರುಡಮುಖಿ, ಸೂಚೀಮುಖಿ, ಘಂಟಾಕರ್ಣ, ಶ್ವಾನ ಪುಚ್ಛರು, ಗಜಪುಚ್ಛ, ವ್ಯಾಘ್ರಪುಚ್ಛರು, ಗಾಲವರು, ಗೋಬಿಲರು, ಅಶ್ವಮುಖ, ಗಜಮುಖಿ, ಶೈನಮುಖ ಹೀಗೆ ಮನುಷ್ಯ ಸ್ವರೂಪ ಪಡೆಯುತ್ತಿದ್ದರು. ಬೃಹದಶ್ವರು ಮಾನವರಿಗೆ ಸುಂದರವಾದ ಈಗಿರುವ ಮನುಷ್ಯ ಸ್ವರೂಪವನ್ನು ಯಾಗದ ಮುಖೇನ ನಮಗೆಲ್ಲಾ ನೀಡಿದರು ಎಂಬ ಸತ್ಯವನ್ನು ತಿಳಿದಾಗ ಡಾರ್ವಿನ್ ಮೊದಲಾದವರು ಹೇಳಿದ ಇಂದಿನ ವಿಜ್ಞಾನಿಗಳ ಮಾತು ಹುಸಿಯಾಗುತ್ತದೆ.
ತಾನು ತಿಂದ ಅನ್ನದಿಂದ ಬುದ್ದಿ ಎಂಬ ವಿಷಯವನ್ನರಿಯಲು ಒಂದು ಯುಗ ಪರ್ಯಂತ ಅಧ್ಯಯನ ಮಾಡಿ ಭೂಮಿಯನ್ನು ಸಮತಟ್ಟು ಮಾಡಿ ಕೃಷಿಯನ್ನು ಆರಂಭಿಸಿದ ವಿಢೂರಥನು. ಆದರೆ ಪೌಷ್ಠಿಕಗಳಿಲ್ಲದ, ಪುನರುತ್ಪಾದನಾ ಶಕ್ತಿ ಇಲ್ಲದ, ವಿಷಭರಿತ ಹೆಚ್ಚು ಆಹಾರ ಉತ್ಪನ್ನಮಾಡಲು ಇಂದಿನ ಕೃಷಿವಿಜ್ಞಾನಿಗಳು ಮುಂದಾಗಿದ್ದಾರೆ ಎಂದರೆ ಎಂತಹ ವಿಪರ್ಯಾಸ?
ಇಂತಹಾ ಆಹಾರ ಸೇವಿಸಿ ಬಂದ ರೋಗಗಳನ್ನು ಗುರುತಿಸಲಾಗದೆ ವೈದ್ಯಕೀಯ ವಲಯ ಸೋತು ಏನೇನೋ ಔಷಧಿಗಳನ್ನು ನೀಡಿ ಮತ್ತಷ್ಟು ಬಿಡಿಸಲಾಗದ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ ಇಂದಿನವರು. ಅಂದು ಮೊದಲು ಮಾನವನಿಗೆ ರೋಗವು ಬಾಧಿಸಿದಾಗ ಚಂದ್ರಕಲೆಗೆ ಅನುಗುಣವಾಗಿ ಗಿಡಮೂಲಿಕೆಯಿಂದ ಸೋಮರಸವನ್ನು ಸಿದ್ಧಪಡಿಸಿ ನೀಡಿದಾಗ, ರೋಗವು ಗುಣವಾಗಲು, ಇವನೇ ಧನ್ವಂತರಿಯೆಂದೇ ಪ್ರಸಿದ್ಧನಾದನು ಸೋಮಕನು.
ಹೀಗೆ ಸುಧೀರ್ಘ ಕಾಲದ ಸಂಶೋಧನೆಯನ್ನು ಮಾಡಿ ಅನೇಕ ಸತ್ಯ ಘಟನೆಗಳನ್ನು ಅಗ್ನ್ಯಾವೈಷ್ಣವೀ ಯಾಗದಲ್ಲಿ ಶ್ರೀ ನಿತ್ಯಾನಂದ ಸ್ವಾಮೀಜಿಯವರು ಕಂಡುಕೊಂಡು ಈ ಮೂರನೆಯ ಸಂಪುಟದಲ್ಲಿ ಪದ್ಯ ರೂಪದಲ್ಲಿ ನೀಡಿದ್ದಾರೆ.
ಯಾವುದೇ ಸಮಸ್ಯೆಗಳಿಗೆ ವೈದಿಕ ಮಾರ್ಗದಲ್ಲಿ ಉತ್ತರವಿದೆ ಹಾಗೂ ಎಷ್ಟೇ ವರ್ಷಗಳ ಕಾಲ ಜೀವಿತವಾಗಿದ್ದು ಸಂಶೋಧನೆ ಮಾಡಿ ಉತ್ತಮವಾದದ್ದನ್ನು ಸಮಾಜಕ್ಕೆ ನೀಡಬಹುದು. ಆದ್ದರಿಂದ ಆಧುನಿಕ ವಿಜ್ಞಾನಿಗಳು ಮತ್ತು ವೈದಿಕರು ಒಂದಾದರೆ ಪ್ರಸಕ್ತ ಕಾಲದ ಸಮಸ್ಯೆಗಳನ್ನು ಅತೀ ಸುಲಭವಾಗಿ ಬಿಡಿಸಿ ಸಮಾಜ ಹಾಗೂ ಪ್ರಕೃತಿಯನ್ನು ಉಳಿಸಿ ಬೆಳಸಲು ಸಹಾಯವಾಗುವಂತಿದೆ ಈ ಮೂರನೆ ತಿರುಕ ಸಂಹಿತಾ.
Vol 4, 76 Pages, ಡಿಸೆಂಬರ್ 2009 – ಆನ್ನೋನ್ನತಿಗೆ, ದೇಹ ಪೋಷಣೆಯ ಋಜು ಮಾರ್ಗ – ನಾಭ ಋಷಿ
ಪರಮಾತ್ಮನ ತುಣುಕುಗಳಾಗಿ ನಾವೆಲ್ಲ ಮಾನವರಾಗಿ ಹುಟ್ಟಿದ್ದೇವೆ. ಆದ್ದರಿಂದ ನಾವೆಲ್ಲಾ ಆಭಿನ್ನತಿಯನ್ನು ಸಾಧಿಸಿ ಮತ್ತೆ ಪರಮಾತ್ಮನನ್ನು ಸೇರಬೇಕು, ಕುಂಡಲಿನಿಯನ್ನು ಜಾಗೃತಗೊಳಿಸಿಕೊಳ್ಳಬೇಕು ಎಂಬ ವಿಚಾರವನ್ನು ಹಿಡಿದು ಪ್ರಸಕ್ತ ಕಾಲದಲ್ಲಿ ಅನೇಕ ಸಾಧಕರು ಮುಗ್ಧ ಸಮಾಜಕ್ಕೆ ಏನೇನೋ ಯೋಗ ಸಾಧನೆಗಳನ್ನು ಹೇಳಿಕೊಟ್ಟು ಅಯೋಮಯ ಸ್ಥಿತಿಗೆ ತೆಗೆದುಕೊಂಡು ಹೋಗಿ ಅತ್ತ ಸಾಧನೆಯೂ ಬಿಡಲಾಗದೆ ಇತ್ತ ಲೌಕಿಕ ಜೀವನದಲ್ಲಿ ಯಶಸ್ಸನ್ನೂ ಕಾಣದೆ ತ್ರಿಶಂಕುವಿನ ಸ್ಥಿತಿಯಲ್ಲಿ ಸಿಲುಕಿಕೊಂಡು ನರಳಾಡುತ್ತಿರುವ ಸಮಾಜ ಒಂದು ಕಡೆಯಾದರೆ, ಇನ್ನೊಂದು ಕಡೆ ಪ್ರಪಂಚದ ಎಲ್ಲಾ ಆಹಾರ ವಸ್ತುಗಳು ಎಲ್ಲಾ ಕಡೆ ಸಿಗುವ ವ್ಯವಸ್ಥೆಯ ಕಾರಣ ಕಾಲ, ಪ್ರಾದೇಶಿಕತೆಯನ್ನು ಅರಿಯದೆ ತಿಂದ ಆಹಾರದಿಂದ ಮತ್ತು ತಾವು ರೂಢಿಸಿಕೊಂಡ ಕರ್ಮದಿಂದ ಈ ದೇಹವು ಅನುಭವಿಸುತ್ತಿರುವ ರೋಗ, ರುಜೆನಗಳಿಗೆ ಮೂಲ ಕಾರಣಗಳನ್ನು ಗುರುತಿಸಲಾಗದ ಇಂದಿನ ವೈದ್ಯಕೀಯ ಪದ್ಧತಿಯು ನೀಡುತ್ತಿರುವ ಔಷಧಿ ಉಪಚಾರಗಳನ್ನು ತಡೆಯಲಾಗದೆ ಜನರು ಮತ್ತಷ್ಟು ನೋವನ್ನು ಅನುಭವಿಸುತ್ತ, ಸಂಪಾದಿಸಿದ ಹಣವನ್ನು ಖಾಲಿ ಮಾಡಿಕೊಂಡು ನರಳುತ್ತಿದೆ ಅದೇ ಸಮಾಜ.
ಇಂತಹಾ ಸ್ಥಿತಿಯಲ್ಲಿ ನಮಗೆ ಬೇಕಾಗಿರುವುದು ಸರಿಯಾದ, ಸೂಕ್ತವಾದ ಜ್ಞಾನ. ಈ ಮಾನವ ದೇಹ ಏಕೆ ಈ ಭೂಮಿಯಲ್ಲಿ ಸೃಜಿಸಿತು, ಇದನ್ನು ಯಾವುದಕ್ಕೆ ಬಳಸಬೇಕು, ಹೇಗೆ ಬಳಸಬೇಕು, ದೇಹದ ಅಂಗಾಗಗಳು ಏಕೆ ರೂಪುಗೊಂಡಿದೆ ಎಂಬೆಲ್ಲ ವಿಚಾರವನ್ನು ತಿಳಿದಾಗ ಮಾತ್ರ ನಿರೋಗಿಯಾಗಿ ಬದುಕಿ, ಆತ್ಮೋನ್ನತಿ ಸಾಧಿಸಲು ಸಾಧ್ಯವಾಗುವ ವಿಚಾರಗಳನ್ನು ನಾಭನೆಂಬ ಋಷಿಯು ಕಂಡುಕೊಂಡ ಸತ್ಯವನ್ನು ಶ್ರೀ ನಿತ್ಯಾನಂದ ಸ್ವಾಮೀಜಿಯವರು ಅಗ್ನ್ಯಾವೈಷ್ಣವೀ ಯಾಗದಲ್ಲಿ ಕಂಡು ಈ ನಾಲ್ಕನೆಯ ಸಂಪುಟದಲ್ಲಿ ನೀಡಿದ್ದಾರೆ. ಪ್ರಸಕ್ತ ಕಾಲದ ಆಧ್ಯಾತ್ಮ ಸಾಧಕರು, ವೈದ್ಯಕೀಯ ಶಾಸ್ತ್ರಜ್ಞರು ಮತ್ತು ಜನ ಸಾಮಾನ್ಯರೂ ಅತಿ ಅವಶ್ಯಕವಾಗಿ ತಿಳಿದು ಬಳಸಿದ್ದಲ್ಲಿ ಮಾನವ ಜೀವನ ಸಾರ್ಥಕವಾಗುತ್ತದೆ.
Vol 5, 84 Pages, ಜನವರಿ 2010 – ಮೂರಕ್ಷರವೇ ಸಾಕು ಆತ್ಯೋದ್ದಾರಕೆ – ಅಕ್ಷವಿಧ್ಯೆ – ನಾಭ ಮುನಿ
ಆತೋದ್ಧಾರಕೆ ಮೂರಕ್ಷರವೇ ಸಾಕು ಎಂದರೆ ಆಶ್ಚರ್ಯವಾಗುವುದಲ್ಲವೆ? ಶಿಕ್ಷಾದಿ ವ್ಯಾಕರಣ, ಜ್ಯೋತಿಷವು, ನಿರುಕ್ತವು, ಉಪನಿಷತ್, ವೇದ ಮುಂತಾದವುಗಳನ್ನು ಕಲಿತರೂ ಆತ್ಮೋದ್ಧಾರ ಸಾಧ್ಯವಿಲ್ಲದಿರುವಾಗ ಕೇವಲ ಮೂರಕ್ಷರ ಸಾಕೆ?
ಈ ಲೋಕ ಸೃಷ್ಟಿಯಾಗಿರುವುದೇ ಮೂರಕ್ಷರದಿಂದ ಆ ಊ ಮ ಇದರ ಸಂಯೋಜನೆಯೇ ಓಂ ಕಾರ ಅದರಿಂದಲೇ ಎಲ್ಲಾ 16 ಸ್ವರಗಳು ಈ ಸ್ವರಗಳಿಂದ ವ್ಯಂಜನಗಳು, ಅವರ್ಗೀಯ ವ್ಯಂಜನಗಳು ಉತ್ಪನ್ನವಾಗಿವೆ, ಒಟ್ಟು 64 ಅಕ್ಷರಗಳು ಇದೇ ಅಕ್ಷವಿಧ್ಯೆ. ಈ ಅಕ್ಷವಿಧ್ಯೆಯಿಂದಲೇ ಈ ಭೂಲೋಕ ಸೃಷ್ಟಿ ಮಾತ್ರವಲ್ಲ ಒಟ್ಟು 14 ಲೋಕಗಳು ಸೃಷ್ಟಿಯಾಗಿವೆ.
ಅಕ್ಷರ ಎಂದರೆ ನಾಶವಿಲ್ಲದ್ದು. ಅಕ್ಷವೇ ಆತ್ಮ ಬೀಜ, ಅಕ್ಷವಿಧ್ಯೆಯಿಂದಲೇ ಆತ್ಮಜ್ಞಾನ, ಆತ್ಮಜ್ಞಾನದಿಂದಲೇ ಅತ್ರೋನ್ನತಿ. ಆನ್ನತಿಗೆ ಇದೊಂದೆ ದಾರಿ ಎಂದು ನಾಭ ಮುನಿಗಳು ಆಗ್ನ್ಯಾ ವೈಷ್ಣವೀಯಾಗದಲ್ಲಿ ಹೇಳಿದ ಅನುಭವ ವಿಚಾರಗಳನ್ನು ಶ್ರೀನಿತ್ಯಾನಂದ ಸ್ವಾಮೀಜಿಯವರು ಸಂಚಿಕೆಯಾದ ಇದರಲ್ಲಿ ಪ್ರಕಟಿಸಿದ್ದಾರೆ.
ಆಊಮ ಮೂರ ಅಕ್ಷರಗಳ ಸಂಯುಕ್ತವಾದ ಓಂ ಕಾರವನ್ನು ಅನುಷ್ಠಾನಿಸಿ 12 ಲೋಕದಲ್ಲಿ ಸಂಚರಿಸಿ ಮುಂದೆ ಸತ್ಯಲೋಕದನಾದ ಬ್ರಹ್ಮಾನಂದಮಯವನ್ನು ಅನುಭವಿಸುತ್ತಿರಬಹುದು, ಬೇಡವೆಂದರೆ ಕೃಷ್ಣಮಯ ಲೋಕ ಸೇರಿ ಎಲ್ಲದರೊಳಗೆ ಲೀನವಾಗಿ ಮುಕ್ತಿಯನು ಪಡೆಯುವುದೇ ಆತ್ಮದ ಕೊನೆಯ ಸಂಸ್ಕಾರ. ಈ ಮೂರಕ್ಷರ ಕಲಿತು ಆತ್ರೋದ್ಧಾರ ಪಡೆಯಲು ಭಾರತೀಯ ಗುರುಕುಲಕ್ಕೆ ಮಕ್ಕಳನ್ನು ಸೇರಿಸಿ.
Vol 6, 62 Pages, ಫೆಬ್ರವರಿ 2010 – ದೀರ್ಘಾಯುಷ್ಯ ವಿಧ್ಯೆ – ಅಣು ವಿಜ್ಞಾನ ಅಂದರೆ ಕಣದ ವಿಧ್ಯೆ – ಕಪಿಲ ಮಹರ್ಷಿ
ಹುಟ್ಟಿದ ಮನುಷ್ಯ ತಾನು ನಿರಂತರವಾಗಿ ಬದುಕುಳಿಯಬೇಕು ಎಂದೆಂದಿಗೂ ಸಾವೇ ಬರಬಾರದು ಎಂಬ ಚಿಂತೆ ಸಹಜ. ಆದರೆ ಈ ಸೃಷ್ಟಿಯು ನಿರಂತರತೆಯನ್ನು ಹೊಂದಲಿ ಎಂಬ ಚಿಂತೆ ಬ್ರಹ್ಮನಿಗೂ ಬಂದಿತೆಂದರೆ ಆಶ್ಚರ್ಯವಲ್ಲವೆ?
ಬ್ರಹ್ಮನ ಈ ಚಿಂತನೆಯ ಕಾರಣವಾಗಿ ಅವನ ಮಾನಸ ಪುತ್ರನಾಗಿ ಕಪಿಲ ಮಹರ್ಷಿಯ ಜನನವಾಯಿತು. ಕಪಿಲನು ಮೂಲ ಚೈತನ್ಯವನ್ನು ಹುಡುಕುತ್ತಾ ಅಣು ವಿಜ್ಞಾನ ಅಂದರೆ ಕಣದ ವಿಧ್ಯೆಯನ್ನು ಹುಟ್ಟುಹಾಕಿದ. ಈ ಅಣುವಿನಿಂದ ಘಾಟಕ (ಜೀವಿಗಳ ಸೃಷ್ಟಿ), ಘೋಟಕ (ಜಗಕ್ಕೆಲ್ಲ ಅನ್ನ) ಮತ್ತು ಸ್ಫೋಟಕ (ಪ್ರಪಂಚ ನಾಶ) ಮಾಡಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟ.
ಈಗಿನ ಆಧುನಿಕ ವಿಜ್ಞಾನಿಗಳು ಸ್ಫೋಟಕವಾಗುವ ಅಣುಗಳನ್ನು ಬಳಸಿ ಅಣು ಸ್ಥಾವರದಿಂದ ವಿದ್ಯುತ್ ಉತ್ಪಾದನೆ ಮಾಡುವುದಲ್ಲದೆ ಅಣು ಬಾಂಬ್‌ಗಳನ್ನು ಸಿಡಿಸಿ ಜನ ಸಮೂಹವನ್ನು ನಾಶಮಾಡುವುದರಲ್ಲಿ ಮುಂದಾದರು. ಆದರೆ ಅಣುವಿನಿಂದ ಜೀವಿಗಳ ಸೃಷ್ಟಿ, ಜೀವಿಗಳಿಗೆ ಅನ್ನವಿಟ್ಟು ನಿರಂತರತೆಯನ್ನು ಸ್ವಯಂ ಕಾಯ್ದುಕೊಳ್ಳುವ ವ್ಯವಸ್ಥೆಯ ಬಗ್ಗೆ ಯಾವ ಸಂಶೋಧನೆ ಆಗಲಿಲ್ಲ. ಬಂಡವಾಳಶಾಹಿಗಳ ಪೋಷಣೆಯಿಂದ ನಡೆಯುವ ಸಂಶೋಧನೆಯಿಂದ ಅದು ಯಾವುದು ಸಾಧ್ಯವೂ ಇಲ್ಲ.
ಆದರೆ ಕಪಿಲ ಮಹರ್ಷಿಯು ಅಣುವಿನಲ್ಲಿರುವ ಎಲ್ಲವನ್ನು ಸಾಧಿಸಿ ಅದರಿಂದಾಗುವ ದುಷ್ಪರಿಣಾಮ ಹಾಗೂ ಉಪಸಂಹಾರ ಹೇಗೆ ಎಂಬುದನ್ನು ತೋರಿಸಿಕೊಟ್ಟು ದೀರ್ಘ ಆಯುಷ್ಯವನ್ನು ಹೇಗೆ ಪಡೆಯಬಹುದೆಂದು ಪಾಕ ಶಾಸ್ತ್ರವನ್ನು ರಚಿಸಿ ಈ ಬ್ರಹ್ಮ ಸೃಷ್ಟಿಯಲ್ಲೆಲ್ಲಾ ನೆಲಸಿ ನಮ್ಮನ್ನು ಹರಸುತ್ತಿದ್ದಾನೆ. ಆಧುನಿಕ ವಿಜ್ಞಾನಿಗಳಿಗೆ ಅಣು ರಹಸ್ಯ ತಿಳಿಯಲು ಇದು ಸೂಕ್ತ ಮಾರ್ಗ
Vol 7, 56 Pages, ಮಾರ್ಚ್ 2010 – ಕರ್ಮಬಂದನವೇಕೆ? ಏನು? – ಪುರೂರವ ಅರಸ
ಈ ಕಾವ್ಯಮಯ ಜಗತ್ತಿನಲ್ಲಿ ವಿಚಾರ ಪ್ರಧಾನ ದೃಷ್ಟಿಯನ್ನು ಮಾತ್ರಾ ಕೇಂದ್ರೀಕರಿಸಿ ಇತರೆ ನಿಯಮಗಳನ್ನು ಬದಿಗಿಟ್ಟು ಸಮಾಜಕ್ಕೆ ಉಪಯುಕ್ತವಾಗಲಿ ಎಂబ ಉದ್ದೇಶದಿಂದ ಈ ಪದ್ಯರೂಪಿಯಾಗಿ ಯಾಗಮುಖದಲ್ಲಿ ಕಂಡ ಸತ್ಯವನ್ನು ಕರ್ಮಸಿದ್ಧಾಂತವನ್ನು ಬೋಧಿಸುವ ಪ್ರಯತ್ನ ಮಾಡಿದ್ದೇನೆ. ಈ ಕರ್ಮಭೂಮಿಯಲ್ಲಿ ಮುಖ್ಯವಾಗಿ ವಿಶೇಷತಃ ಮಾನವನಿಗೆ ಬಾಧಿಸತಕ್ಕ ಋಣಕರ್ಮಗಳು ಕಥೆ ಹೇಳುವ ಮುಖೇನ ವಿಮರ್ಶಿಸಲಾಗಿದೆ. ಇಲ್ಲಿ ಮುಖ್ಯವಾಗಿ ಕಾಯಾ-ವಾಚಾ-ಮನಸಾ ಪ್ರವರ್ತಿಸತಕ್ಕ ಕರ್ನು ವಿಶೇಷವನ್ನು ವಿವರಿಸಿದ್ದೇನೆ. ತತ್ಸಂಬಂಧವಾಗಿ ಋಣಪ್ರವರ್ತನೆ ಹೇಗೆ? ಅರಿಷಡ್ವರ್ಗಗಳು ಏನು? ಏಕೆ? ಹೇಗೆ? ಸದ್ಗುಣವು ಮಾರ್ಗದರ್ಶಕ ಹೇಗೆ? ಒಟ್ಟು ಕರ್ಮಗಳು ಎಷ್ಟು ಪ್ರಭೇದ? ಅವುಗಳು ಈ ಜಗದ ನಿರಂತರತೆಯನ್ನು ಹೇಗೆ ಕಾಯ್ದು ಕೊಂಡು ಬಂದಿವೆಯೆಂಬ ವಿಚಾರವನ್ನೆಲ್ಲಾ ಕೂಲಂಕುಶವಾಗಿ ವಿವರಿಸಿದ್ದೇನೆ.
ಇಲ್ಲಿ ಪುರೂರವನೆಂಬ ಅರಸು ತನ್ನ ಅಧಿಕಾರದಲ್ಲಿ ನಿಷ್ಕಳಂಕತೆಯಿಂದಲೇ ರಾಜ್ಯವಾಳಿದವನು, ಧರ್ಮಿಷ್ಠ. ಆದರೆ ಒಂದು ದಿನ ತನ್ನ ಸಭೆಯಲ್ಲಿ ನೆರೆದ ಜನರಿಗೆ ತನ್ನ ಪೀಠದ ಮಹತ್ವವನ್ನರಿಯದೇ ಧೈವನಿಂದನೆ, ಕರ್ಮನಿಂದನೆ, ಶಾಸ್ತ್ರಾದಿನಿಂದನೆಯಂತಹಾ ಪ್ರಶ್ನೆಯನ್ನು ಕೇಳುತ್ತಾನೆ. ಅವನು ಸಾಮಾನ್ಯ ವರ್ಗದವನೂ, ಒಬ್ಬ ಪ್ರಜೆಯೂ ಆಗಿದ್ದಲ್ಲಿ ಅವನು ಕೇಳಿದ ಪ್ರಶ್ನೆ ಅಷ್ಟೇನೂ ಗಮನೀಯವಲ್ಲವಿತ್ತು. ಆದರೆ ಅಧಿಕಾರಸ್ಥಾನದಲ್ಲಿದ್ದು ಈ ಪ್ರಶ್ನೆ ಕೇಳಬಾರದಿತ್ತು.
ಒಂದು ವಿಧಿಯಿದೆ. ಮಗು ಮಾತು ಕಲಿಯುವಾಗೆಲ್ಲಾ ಪ್ರಶ್ನೆಗಳೂ ಮಾನ್ಯ ಹುಡುಗುತನದಲ್ಲಿ ಔದಾಸೀನ್ಯ, ಪ್ರೌಢತೆಯಲ್ಲಿ ದಂಡನೆ, ಅಧಿಕಾರದಲ್ಲಿ ಬಹಿಷ್ಕಾರ, ಅರಸನಾದರೆ ವನವಾಸವೆಂದಿದೆ. ಒಂದು ಸ್ಥಾನದಲ್ಲಿ ಕುಳಿತಾಗ ಸ್ಥಾನಬದ್ಧತೆಯೊಂದಿಗೆ ಮಾತಿರಬೇಕು. ಹಾಗಾಗಿ ಅರಸನ ಮಾತನ್ನು ಖಂಡಿಸಿದ ಒಬ್ಬ ಋಷಿಯು ಅವನನ್ನು ಪೀಠದಿಂದ ಕೆಳಗಿಳಿಸಿ ಅವನ ಮಗನಿಗೆ ಪಟ್ಟ ಕಟ್ಟುತ್ತಾನೆ. ನಂತರ ಅವನ ಎಲ್ಲಾ ಪ್ರಶ್ನೆಗಳಿಗೂ ಸಮಂಜಸ ಉತ್ತರ ನೀಡಿ ವನವಾಸಕ್ಕೆ ತೆರಳೆಂದು ಕಳಿಸುತ್ತಾನೆ. ಗಮನಿಸಿ ಅಧಿಕಾರಸ್ಥಾನದಲ್ಲಿದ್ದ ಒಬ್ಬ ವ್ಯಕ್ತಿಯ ಬದ್ಧತೆ ಎಷ್ಟು ಎಂದು.
ಇಲ್ಲಿ ಮುಖ್ಯವಾಗಿ ಕರ್ಮಜಿಜ್ಞಾಸೆಯನ್ನು ಮಾಡಿದೆ. ಕರ್ಮಬಂಧನವೇಕೆ? ಏನು? ಪ್ರಕೃತಿಯ ನಿರಂತರತೆ ಹೇಗೆ ಎಂಬುದನ್ನು ಆದಷ್ಟು ಸರಳವಾಗಿ ಎರಡು ಉಪಕಥೆಗಳ ಸಹಿತವಾಗಿ ವಿವರಿಸಲಾಗಿದೆ. ಅಲ್ಲದೆ ಮಾನವ ದೇಹ ಅಂಗಗಳು ಕರ್ಮದ್ಯೋತಕ ಹೇಗೆಂದು ವಿವರಿಸಲಾಗಿದೆ. ನಖಗಳನ್ನೂ ವಿವರಿಸಿದೆ. 5 ಬೆರಳಿರುವ ಮಾನವ ಐದೂ ಕರ್ಮಗಳಿಗೆ ಬಾಧ್ಯಸ್ಥ, ಅದೇ ನಾಲ್ಕು, ಮೂರು ಬೆರಳಿರುವ ಇತರೆ ಪ್ರಾಣಿ ಪಕ್ಷಿಗಳ ಬಗ್ಗೆಯೂ ಸ್ಕೂಲವಾಗಿ ವಿವರಿಸಿರುತ್ತದೆ. ಒಟ್ಟಾರೆ ಒಟ್ಟು ಕರ್ಮ ಪ್ರಭೇದಗಳು ಹದಿನೆಂಟು ಎಂದೂ, ಅದನ್ನು ಜಯಿಸುವುದೇ ಮುಕ್ತಿಸಾಮ್ರಜ್ಯ ವಿಜಯವೆಂಬ ಮಹಾಭಾರತ ಸತ್ಯವನ್ನು ತೋರಿಸಲಾಗಿದೆ. ಹಲವಾರು ಬಾರಿ ಓದಿ ಅರ್ಥಮಾಡಿಕೊಂಡು ಈ ಪ್ರಾಪಂಚಿಕ ಕರ್ಮಬಂಧನದಿಂದ ಬಿಡುಗಡೆ ಹೊಂದುವ ಪ್ರಯತ್ನದಲ್ಲಿ ಎಲ್ಲರೂ ಒಂದಾಗೋಣವೆಂದು ಹಾರೈಸುತ್ತಾ ಈ ಲೇಖನ ಮುಗಿಸುತ್ತಿದ್ದೇನೆ.
Vol 8, 56 Pages, ಮೇ 2010 – ಋತುವನ್ನು ಅರಿತರೆ ಮಾನವ ಪರಮಾತ್ಮನಾಗಬಲ್ಲ – ಶಿವಪಾರ್ವತಿಯರ ಸಂವಾದ
ಋತುರಾಜ ವರ್ಣನೆ: ಆದಿದಂಪತಿಗಳಾದ ಶಿವಪಾರ್ವತಿಯರ ಸಂವಾದರೂಪದಲ್ಲಿ ಪಾರ್ವತಿಯು ಕೇಳಿದ ಪ್ರಶ್ನೆಗಳಿಗೆ ಉತ್ತರರೂಪದಲ್ಲಿ ವಿವರಿಸುತ್ತಾ ಋತುಗಳ ವರ್ಣನೆ, ತಿಥಿ ವಾರ ನಕ್ಷತ್ರ ಯೋಗ ಕರಣಗಳ ವ್ಯವಹಾರವು, ಅವುಗಳ ಮಹತ್ವವೇನು, ಅವನ್ನು ಸೇರಿಸಿ ಪಂಚಾಂಗರೂಪುಗೊಂಡಿದ್ದು ಹೇಗೆ ಎಂಬಿತ್ಯಾದಿ ವಿಚಾರಗಳು ಬಂದಿರುತ್ತವೆ. ಒಂದು ಋತುವಿಗೆ ಎರಡು ಮಾಸಗಳು ಏಕೆ? ಅದಕ್ಕೆ ಉತ್ತರವೂ ಕೂಡ ಈ ಸಂಹಿತೆಯಲ್ಲಿದೆ.
ಆಧುನಿಕರ ಅಭಿಪ್ರಾಯದಲ್ಲಿ ಪಂಚಾಂಗವು ಕೇವಲ ಜೋಯಿಸರ ಹೊಟ್ಟೆ ತುಂಬಲಿಕ್ಕೆ ಎಂಬಂತೆ ತಿಳಿದಿದ್ದಾರೆ. ತಿಥಿವಾರನಕ್ಷತ್ರಗಳಲ್ಲಿ ಏನೂ ಇಲ್ಲ ಎಂದು ಹೇಳುವವರೇ ಕೆಲವು ಬಾರಿ ತಮ್ಮ ಕೆಲಸಕಾರ್ಯಗಳಿಗೆ ಅವುಗಳನ್ನು ನೋಡುವುದುಂಟು. ತಿಥಿಯೇ ಬೇರೆ, ವಾರವೇ ಬೇರೆ, ನಕ್ಷತ್ರಗಳೇ ಬೇರೆ, ಯೋಗವೇ ಬೇರೆ, ಕರಣವೇ ಬೇರೆ ಎಂబ ವಿಚಾರಗಳು ಇದರಲ್ಲಿ ಸ್ಪಷ್ಟವಾಗಿವೆ.
ಅವುಗಳ ಕೆಲಸಕಾರ್ಯಗಳೂ ಕೂಡ ಬೇರೆ ಬೇರೆಯೇ ಆಗಿವೆ. ಒಂದೊಂದು ಕೆಲಸಗಳಿಗೆ ಒಂದೊಂದು ಬಳಕೆಯಾಗುತ್ತದೆ ಎಂಬ ವಿಚಾರವನ್ನು ಇದರಲ್ಲಿ ತಿಳಿಸಿದ್ದಾರೆ. ಕೆಲಸಕಾರ್ಯಗಳಿಗೆ, ಶುಭಸಮಾರಂಭಗಳಿಗೆ ಇತ್ಯಾದಿ ಮುಹೂರ್ತವಿಡುವಾಗ ಇವೆಲ್ಲ ಗಮನಕ್ಕೆ ಬರುವಂತಹ ವಿಚಾರಗಳಾಗಿರುತ್ತವೆ. ಇವೆಲ್ಲಾ ಮೇಲ್ನೋಟದ ವಿಚಾರಗಳಾದರೆ ಆಧ್ಯಾತ್ಮಿಕವಾಗಿ ಕಾಲನ ನಡೆ, ಕಾಲನಾ ವಿಭಾಗಗಳು, ನಾವು ನಿತ್ಯ ಜಪಿಸುವ ಸದ್ಯೋಜಾತಾದಿ ಐದು ಮಂತ್ರಗಳು, ಕಾಲನ 5 ಹಂತವನ್ನು ಹೇಳುತ್ತದೆ ಮತ್ತು ಅದರ ಪರಿಣಾಮವನ್ನು ಹೇಳುವುದೇ ಈ 5 ಮಂತ್ರಗಳು.
ಹಾಗೆ ಕಾಲನನ್ನು ಅರಿಯುವ ವಿಧಾನ, ಋತುಗಳ ನಿಜವಾದ ರಹಸ್ಯಗಳು, ಯಾರಿಂದ ಕಂಡು ಹಿಡಿಯಲ್ಪಟ್ಟು ಪ್ರಪಂಚಕ್ಕೆ ತಿಳಿಯುವಂತಾಯಿತು, ಜೀವಿಗಳಲ್ಲಿ ಮನುಷ್ಯಜೀವಿಯ ಮನಸ್ಸಿನ ವಿವಿಧ ಹಂತಗಳು ಯಾವ ಯಾವ ಋತುಕಾಲದಲ್ಲಿ ಕೆಲಸ ಮಾಡುತ್ತವೆ, ಅವು ಪ್ರಕೃತಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ, ಅರಿತುಕೊಂಡ ಮಾನವ ಅದನ್ನು ಹೇಗೆ ತನ್ನ ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ, ಜಗತ್‌ಸೃಷ್ಟಿ ಹೇಗಾಯಿತು ಎಂಬಿತ್ಯಾದಿ ವಿಚಾರಗಳೂ ಕೂಡ ಇದರಲ್ಲಿ ಅಡಕವಾಗಿವೆ. ಈ ಋತುಗಳ ನಡೆಗೆ ಚಂದ್ರನ ನಡೆಯೇ ಕಾರಣವೆಂದು ಇದರಲ್ಲಿ ಹೇಳಲಾಗಿದೆ. ನಿಜವಾಗಿ ಚಂದ್ರನ ಮಾಪನ ಬಿಟ್ಟರೆ ಮನಸ್ಸಿನ ನಡೆಯೇ ಋತುಗಳಿಗೆ ಕಾರಣವೆಂದು ಹೇಳಬಹುದು. ನಮ್ಮ ಮನಸ್ಸಿನ ಯೋಚನೆಗಳೆಂತೆಯೇ ಪ್ರಕೃತಿಯಲ್ಲಿ ನಡೆಗಳುಂಟಾಗುವುದರಿಂದ ನಮ್ಮ ಮನಸ್ಸಿನ ಯೋಚನೆಗಳು ಉತ್ತಮಗತಿಯಲ್ಲಿ ಚಲಿಸಿ, ಈಗಿನ ವಿಕೃತತೆಯು ಹೋಗಿ, ಪ್ರಕೃತಿಯಲ್ಲಿ ಉತ್ತಮ ಪರಿಣಾಮ ಉಂಟಾಗಿ ದೇಶ ಸುಭಿಕ್ಷವಾಗಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸೋಣ.
Vol 9, 80 Pages, ಅಕ್ಟೋಬರ್ 2010 – ಅಥಮಾಡಿಕೊಂಡ ಮಾನವ ತಾನೇ ತಾನಾಗಿ ಉಳಿಯಬಲ್ಲ – ಯಾರು ಈ ತಿರುಪತಿ ತಿಮ್ಮಪ್ಪ?
ಇದು ಒಂದು ವಿಶೇಷ ವಿಚಾರವನ್ನು ಗೂಢವಾಗಿಯೂ, ಅರ್ಥಗರ್ಭಿತವಾಗಿಯೂ, ಸತ್ಯ ವಿಚಾರದ ಮೇಲೆ ಬೆಳಕು ಚೆಲ್ಲುವುದಾಗಿಯೂ ಪ್ರಕಟಗೊಂಡಿರುತ್ತದೆ. ಇದರಲ್ಲಿ ಬೇರೇನೂ ಕುಟಿಲತೆಯಿಲ್ಲವೆಂದು ಘೋಷಿಸುತ್ತೇನೆ. ಮುಖ್ಯವಾಗಿ ಕಲಿಯುಗಾರಂಭವಾಗಿ ಅಂದಾಜು ಒಂದೂವರೆ ಸಾವಿರ ವರ್ಷಕ್ಕೆ ಹಿಂದಿನ ಧರ್ಮಸಾಮ್ರಾಜ್ಯ ಪದ್ಧತಿ ಪೂರ್ತಾ ಕ್ಷೀಣಿಸಿತು. ಅರಸನೂ ಕೂಡ ಅವಿಧ್ಯಾವಂತನಾಗಿದ್ದ ಉದಾಹರಣೆಯಿದೆ. ಪುರೋಹಿತಶಾಹಿ ಮತ್ತು ತಾಂತ್ರಿಕ ಶಾಹಿಯ ಪ್ರಾಬಲ್ಯತೆ ದೇಶವನ್ನು ಆಳುತ್ತಿತ್ತು. ಸಾಮಾನ್ಯ ಮಧ್ಯಮವರ್ಗ ಜಯಕಾರ ಹೇಳಿಕೊಂಡು ಸುಖವಾಗಿಯೇ ಬದುಕಿದ್ದರು. ಆದರೆ ತೀರಾ ಬಡವರ್ಗ ಮತ್ತು ಶ್ರೀಮಂತವರ್ಗದ ಜೀವನದ ಚಿತ್ರಣವೇ ಬೇರಿತ್ತು.
ತೀರಾ ಬಡವರ್ಗದ ಜನರಿಗೆ ಸ್ವಾತಂತ್ರ್ಯ ವಿರಲಿಲ್ಲ. ಅವರಲ್ಲಿ ಯಾವುದೇ ನೈತಿಕತೆಯೂ ಇರಲಿಲ್ಲ. ಪುರೋಹಿತಶಾಹಿಗಳ ಹಿಡಿತದಲ್ಲಿ ಗೌರವವಿಲ್ಲದ ಜೀವನವಾಗಿತ್ತು. ಆದರೆ ಹೊಟ್ಟೆಗೆ ಬಟ್ಟೆಗೆ ಸಮೃದ್ಧಿಯಿತ್ತು. ದಾಸ್ಯ ಜೀವನ ಮಾತ್ರ ನಿರಂತರವಾಗಿತ್ತು. ಪೂರ್ತಾ ಅವಿಧ್ಯಾವಂತರಾಗಿದ್ದರು. ಆದರೆ ಅದರಲ್ಲೇ ಸುಖ ಕಾಣುವ ಪ್ರವೃತ್ತಿ ಹೊಂದಿದ್ದರು. ಸಮಕಾಲೀನ ತಾಂತ್ರಿಕರು ಅಲ್ಲಲ್ಲಿ ಅದರ ವಿರುದ್ಧ ಸಿಡಿದೆದ್ದು ಸಂಘಟನೆ ಮಾಡಿದರೂ ಪುರೋಹಿತ ಶಾಹಿಯ ರಾಜವಿಕ ಬಲದಿಂದ ಯಶಸ್ವಿಯಾಗಲಿಲ್ಲ. ಆದರೆ ಅವರದ್ದೇ ಆದ ಬಡ, ಸಾಮಾನ್ಯ ಜನರ ಒಕ್ಕೂಟ, ಸ್ವತಂತ್ರ ಆರಾಧನೆ, ಧೈವ, ಭೂತಗಳ ಉಪಾಸನೆ ನಡೆಸಿಕೊಂಡು ಒಂದು ರೀತಿಯಲ್ಲಿ ಭದ್ರ ಜೀವನ ಸ್ವಾತಂತ್ರ್ಯವಿಲ್ಲದಿದ್ದರೂ ನಡೆಸಿಕೊಂಡು ಬರುತ್ತಿದ್ದರು. ಶ್ರೀಮಂತವರ್ಗ ತಮ್ಮ ಸಂಪತ್ತನ್ನೆಲ್ಲಾ ಪುರೋಹಿತಶಾಹಿಯ ಇಚ್ಛೆಯರಿತು ದಾರೆಯೆರೆಯುತ್ತಾ ಹೊಗಳು ಭಟ್ಟರ ಕೇಕೆಯಲ್ಲಿಯೇ ಹುಸಿ ಸ್ವಾತಂತ್ರ ಗೌರವ ಪಡೆದು ಭ್ರಾಂತರಾಗಿ ಬಾಳುತ್ತಿದ್ದರು. ಈ ಸಂದರ್ಭದ ಒಂದು ಘಟನಾ ವಿಚಾರವೇ ಈ ತಿಮ್ಮನ ಕಥೆ.
ವೇದ ವಿಜ್ಞಾನಮಂದಿರದಲ್ಲಿ ನಡೆಯುತ್ತಿರುವ ಅಗ್ಯಾವೈಷ್ಣವೀ ಯಾಗ ಸಂದರ್ಭದಲ್ಲಿ ಕಂಡು ಬಂದ ಈ ವಿಚಾರವನ್ನು ಯಾಗ ಸಂದರ್ಭದಲ್ಲಿ ವಷಟ್ಕಾರ ಪ್ರಯೋಗ ರೀತ್ಯಾ ಆಗದ್ದನ್ನು ಗುರುತಿಸಿ ಕಾರಣವೇನೆಂದು ಚಿಂತಿಸಲಾಗಿ ಯಾಜುಷ ಮಂತ್ರಗಳಲ್ಲಿ ಪ್ರಯೋಗ ಭಾಗವು ಸ್ಥಂಭಿಸಲ್ಪಟ್ಟಿದೆಯೆಂದೂ, ಅದು ಈ ಕಲಿಯುಗದಲ್ಲಿ ದುರುಪಯೋಗ ಆಗಬಹುದೆಂಬ ಉದ್ದೇಶದಿಂದ ಸಾಕ್ಷಾತ್ ಶ್ರೀಮನ್ನಾರಾಯಣನೇ ಅಂಶರೂಪದಲ್ಲಿ ತಿಮ್ಮನಾಗಿ ಜನಿಸಿ ಸಕಲ ಚಾಟಕ, ಮಾಟಕಾದಿ ತಂತ್ರಗಳನ್ನು ತನ್ನಲ್ಲಿ ಜೀರ್ಣಸಿಕೊಂಡು ಸ್ಥಂಭಿಸಿದನೆಂದೂ, ಮುಂದೆ ಲಂಫಟ್ಕಾರದಿಂದ ಮಾತ್ರಾ ಪ್ರಯೋಗ ಸಾಧ್ಯವೆಂದೂ ಕಂಡುಬಂತು. ಅದರಂತೆ ಅದರ ಹಿನ್ನೆಲೆಯನ್ನೆಲ್ಲಾ ಕುತೂಹಲದಿಂದ ವಿಮರ್ಶಿಸಲಾಗಿ ಅಂದಾಜು ಮೂರು ಸಾವಿರಕ್ಕಿಂತ ಹೆಚ್ಚು ವರ್ಷಗಳ ಹಿಂದೆ ಶ್ರದ್ಧಾಳುವಾದ ಬ್ರಾಹ್ಮಣನೊಬ್ಬನು ತನ್ನ ಕುಬ್ಜೆ ಹೆಂಡತಿಯಲ್ಲಿ ಸಂತಾನ ಪಡೆಯುವ ಉದ್ದೇಶದಿಂದ ಜಂಗಿಡ ಪ್ರಯೋಗ ಮಾಡಿ ದೀರ್ಘಕಾಯವನ್ನು ಪಡೆದು ಆಕೆಯಲ್ಲಿ ಹುಟ್ಟಿದ ಮಗುವೇ ತಿಮ್ಮ. ಮನುಷ್ಯ ಪ್ರಮಾಣದ ಎರಡುಪಟ್ಟು ದೀರ್ಘಕಾಯವನ್ನು ಪಡೆದ ತಿಮ್ಮನು ಹೇಗೆ ವಿಧ್ಯೆಗಳನ್ನು ಸಾಧಿಸಿದ? ಯಾವ್ಯಾವ ವಿಧ್ಯೆಯನ್ನು ಸಾಧಿಸಿ ಅದನ್ನು ಹೇಗೆ ಬಳಸಿದ, ಬೆಳೆಸಿದ, ಲೋಕೋಪಕಾರಿಯಾದ. ನಂತರ ಹೇಗೆ ಆತನೇ ವಿಧ್ಯಾರೂಪದಲ್ಲಿ ತನ್ನಲ್ಲಿ ಐಕ್ಯ ಮಾಡಿಕೊಂಡು ಶಿಲೆಯಾದ ಎಂಬ ವಿಚಾರವೇ ಈ ಕಥಾನಕ. ಅಲ್ಲದೇ ಒಂದು ವಿಶೇಷ ಪಂಚೀಕರಣ ಸೂತ್ರವನ್ನು ಇದರಲ್ಲಿ ಸೇರಿಸಿ ದೇಶದಲ್ಲಿರುವ ತುಡುಗು, ವಂಚನೆ, ಭ್ರಷ್ಟಾಚಾರ, ಲೋಭತ್ವ, ಕ್ರೂರತನವು ನಿವಾರಣೆಯಾಗುವಂತೆಯೂ ಇದು ರಚಿಸಲ್ಪಟ್ಟಿದೆ. ಓದಿ ಅರ್ಥ ಮಾಡಿಕೊಂಡವನು ಪ್ರಭುವಾಗಬಲ್ಲ, ಜ್ಞಾನಿಯಾಗಬಲ್ಲ, ದೇವನಾಗಬಲ್ಲ, ಬ್ರಹ್ಮನಾಗಬಲ್ಲ, ಇಲ್ಲಾ ತಾನೇ ತಾನಾಗಿ ಉಳಿಯಬಲ್ಲನೆಂದು ತಿಳಿಸುತ್ತಾ ಈ ಲೇಖನ ಸರ್ವರಿಗೂ ಮಂಗಳವನ್ನುಂಟು ಮಾಡಲಿ ಎಂದು ಯಾಗ ದೇವತೆಗಳೂ, ಮಂತ್ರದ್ರಷ್ಟಾರ ಋಷಿಗಳಲ್ಲಿ ಪ್ರಾರ್ಥಿಸುತ್ತೇನೆ.
Vol 10, 52 Pages, ಜನವರಿ 2011 – ದೇವರ ಕೆಲ ವೈಕೃತಿಕ ರಹಸ್ಯ, ಬ್ರಹ್ಮಸೂತ್ರ ಅದರ ಹಿಂದಿರುವ ಆತ್ಮಿಕ ನಿರ್ಭಂಧ – ಉಗಾಭೋಗಸಂಧಿ.
ಸಹಜ ಪ್ರಕೃತಿಯು ಹೇಗೆ ಜೀವರಾಶಿಗಳಿಗೆ ನಿರಂತರತೆಯನ್ನಿಟ್ಟು ಜೀವಸಂಕುಲ ಪರಸ್ಪರ ಪ್ರೀತಿ ಪುರಸ್ಪರವಾಗಿ ಬೆಳೆಯುತ್ತದೆ ಮತ್ತು ಆತ್ರೋನ್ನತಿ ಹಾರೈಸಿದ ಮಾನವ ಇದರಲ್ಲಿ ಅಡಕವಾಗಿರುವ ಯೋಗ+ಮಾಯಾಂತರ್ಗತ ವೈಕೃತಿಕ ಪಾದವನ್ನು ಹೇಗೆ ಅರಿಯುವುದೆಂಬ ವಿಶೇಷವಾದ ಅಷ್ಟೆ ರಹಸ್ಯಾತ್ಮಕ ವಿಚಾರವನ್ನು ಈ ಲೇಖನ ರೂಪದಲ್ಲಿ “ಉಗಾಭೋಗಸಂಧಿ”ಯೆಂಬ ಪದ್ಯರೂಪದಲ್ಲಿ ಬರೆದಿರುತ್ತೇನೆ. ಓದಿ, ತಿಳಿದುಕೊಂಡು ಅರ್ಥ ಮಾಡಿಕೊಂಡಲ್ಲಿ ದೇವರ ಕೆಲ ವೈಕೃತಿಕ ರಹಸ್ಯ, ಬ್ರಹ್ಮಸೂತ್ರ, ಅದರ ಹಿಂದಿರುವ ಆತ್ಮಿಕ ನಿರ್ಬಂಧ ಅರಿಯಬಹುದು. ಈ ವಿಚಾರ ಅರ್ಥಮಾಡಿಕೊಳ್ಳಿರೆಂದು ಹಾರೈಸುತ್ತೇನೆ.
Vol 11, 52 Pages, ಆಗಸ್ಟ್ 2011 – ದೇಶವಾಳುವ ದೊರೆಯ ಕರ್ತವ್ಯ, ಶಾಸನ, ಬದ್ಧತೆ, ಸಂಕಷ್ಟಾದಿಗಳು, ರಾಜ್ಯಸೂತ್ರಗಳ ರಹಸ್ಯಗಳು – ಒಂದು ಹೊಸ ಪ್ರಯೋಗ.
ಈ ಬಾರಿ ದೇಶವಾಳುವ ದೊರೆಯ ಕರ್ತವ್ಯ, ಶಾಸನ ಬದ್ಧತೆ, ಸಂಕಷ್ಟಾದಿಗಳು, ರಾಜ್ಯಸೂತ್ರಗಳು ಎಂಬ ನಾಲ್ಕು ವಿಧದ ನಾಲ್ಕು ಸಾಲಿನ – ಪದ್ಯಗಳನ್ನು ರಚಿಸಿರುತ್ತೇನೆ. ಇದರಲ್ಲಿ
1) ಕರ್ತವ್ಯ 2) ಬದ್ಧತೆ 3) ಶಾಸನ 4) ರಾಜ್ಯಸೂತ್ರ
ಹೀಗೆ ಯಾವುದೇ ಒಂದು ಸಾಲಿನಿಂದ ಆರಂಭಿಸಿ “ಫಾಲಪುಷ್ಪದಳ ಸೂತ್ರದಂತೆ” ವಾಚಿಸಲು ಕರ್ತವ್ಯ ಹೇಳುತ್ತದೆ. “ಫಲಾಶ ಪುಷ್ಪದಳ ಸೂತ್ರದಂತೆ” ವಾಚಿಸಲು ಬದ್ಧತೆ ಹೇಳುತ್ತದೆ. “ನೀಲೋತ್ಪಲ ಪುಷ್ಪದಳ ಸೂತ್ರದಂತೆ” ವಾಚಿಸಲು ಶಾಸನ ವಿಧಿಸುತ್ತದೆ. “ಮಣಿಕರ್ಣಿಕಾ ಸೂತ್ರದಂತೆ” ವಾಚಿಸಿದರೆ ರಾಜ್ಯಸೂತ್ರ ವಿವರಿಸುತ್ತದೆ. ಕೊನೆಯಲ್ಲಿ “ಚೌಪದಿಯಾಗಿ” ವಾಚಿಸಿದರೆ ಕಥೆ ಹೇಳುತ್ತದೆ.
ಇದೊಂದು ಹೊಸ ಪ್ರಯೋಗ. ಪ್ರಾಚೀನ ಭಾಷೆಯಾದ ಪಾಲಿಯಲ್ಲಿ ಇದ್ದ ಒಂದು ವಿಚಾರ ಸಂಕೋಚಿಸುವ ಸೂತ್ರ. ಆಚಾರ್ಯ ಚಾಣಕ್ಯರು ಶತ್ರು, ಮಿತ್ರರಾಜರಿಗೆ ಬರೆಯುತ್ತಿದ್ದ ಲೇಖನದಲ್ಲಿ ಅಕ್ಷಸೂತ್ರವೆಂಬ ಈ ಪದ್ಧತಿಯನ್ನು ಬಳಸುತ್ತಿದ್ದರು. ಅಲ್ಲಿ ಯಾರಿಗೆ ಯಾವ ವಿಷಯ ಹೇಳಬೇಕೋ ಅದನ್ನು ಮಾತ್ರಾ ಆ ಲೇಖನ ತಿಳಿಸುತ್ತಿತ್ತು. ಹಾಗಾಗಿ ಒಂದೇ ಪತ್ರವು ನಂದರ ಸ್ನೇಹಿತನಾದ ಪರ್ವತರಾಜನಲ್ಲಿ ಮಿತ್ರಭೇದವನ್ನೂ, ಹಾಗೇ ನಂದರಲ್ಲಿ ಶರಣಾಗತಿಯನ್ನೂ, ಶ್ರಮಣಕನಿಗೆ ಶತ್ರುನಾಶವನ್ನೂ, ಮಿತ್ರವಿಂದೆಗೆ ಮುಹೂರ್ತವನ್ನೂ ಬರೆದಿದ್ದರು. ಅದು ಈ ಲೇಖನದಲ್ಲಿ ಕೆಲ ಮುಖ್ಯ ಮುಖ್ಯ ಭಾಗದಲ್ಲಿ ಪ್ರಾಯೋಗಿಕವಾಗಿ ಅಳವಡಿಸಿದ್ದೇನೆ. ಇದೊಂದು ಪ್ರಯೋಗ ಅಷ್ಟೆ. ವಿದ್ವಜ್ಜನರು ಇದನ್ನು ಗುರುತಿಸಿದಲ್ಲಿ ಅದರ ಪ್ರಯೋಗ ಮುಖೇನ ಇನ್ನೂ ಹೆಚ್ಚು ಸಾಧಿಸಬಹುದು ಎಂಬುದು ನನ್ನ ಅನಿಸಿಕೆ. ಆಚಾರ್ಯ ಚಾಣಕ್ಯರು ಅರ್ಥಶಾಸ್ತ್ರವನ್ನೂ, ರಾಜ್ಯಶಾಸ್ತ್ರವನ್ನೂ ಬರೆದಾಗ ಈ ಸೂತ್ರ ಬಳಸಿದ್ದಾರೆಯೆಂಬುದು ಮೂಲ ಶ್ಲೋಕ ಅಧ್ಯಯನ ಮಾಡಿದರೆ ಅರ್ಥವಾಗುತ್ತದೆ. ಹೆಚ್ಚಾಗಿ ಅನುಷ್ಟುಪ್ ಛಂದಸ್ಸಿನ ನಾಲ್ಕು ಪಾದಗಳ ಎಂಟು ಅಕ್ಷರದ ಸಮೂಹದಲ್ಲಿ ಶ್ಲೋಕ ರಚಿಸಿದ್ದಾರೆ. ರಾಜ್ಯಶಾಸ್ತ್ರ ಸೂತ್ರಗಳು ನಾಲ್ಕು ಸಾವಿರ ಶ್ಲೋಕಗಳ ಈ ವೇದ ಸಮಾನ ಸಂಹಿತೆ ಸಂಸ್ಕೃತದಲ್ಲಿದೆ. ಆದರೆ ಈ ಪಾಲಿಭಾಷೆಯ ಕಾವ್ಯ ಪ್ರಕಾರ ಬಳಕೆಯಾದದ್ದು ಕಂಡು ಬರುತ್ತದೆ. ಇದು ಚಾಣಕ್ಯರ ಬುದ್ಧಿಕೌಶಲ್ಯ. ನಾನೇನೂ ಅವರಷ್ಟು ಬುದ್ಧಿವಂತನೆಂದು ಇದರರ್ಥವಲ್ಲ. ಅವರ ಪಾದರೇಣುವಿಗೂ ನಾನು ಸಮಾನವೆಂದು ಹೇಳಲಾರೆ. ಆದರೆ ಅವರು ಬರೆದಿದ್ದನ್ನು ಅನುಕರಣೆ ಮಾಡಿದ್ದೇನೆ ಅಷ್ಟೆ. “ಶುಕಪ್ರಲಾಪ” ಇಂದು, ಮುಂದು, ಎಂದೆಂದಿಗೂ ಆಚಾರ್ಯ ಚಾಣಕ್ಯರ ರಾಜ್ಯಸೂತ್ರ ಅರ್ಥಶಾಸ್ತ್ರ ಬೆಲೆ ಕಳೆದುಕೊಳ್ಳಲಾರದು. ಇದು ಸತ್ಯ. ಇಲ್ಲೆಲ್ಲಾ ನಿಗೂಢಭಾಷೆ ಅಳವಡಿಸಿದ್ದಾರೆ. ಜೈನ “ಷಟ್ಕಂಡಾಗಮ” ಸೂತ್ರವೂ ಇಲ್ಲಿ ಹೆಸರಿಸ ಬಹುದು. ಅದರಲ್ಲಿಯೂ ಕೂಡ ಕೆಲ ವಿಚಾರಗಳು ತುಂಬಾ ಸರಳವೆಂಬ ರೀತಿಯಲ್ಲಿ ಬರೆದಿದೆಯಾದರೂ ಅದು ಅತೀ ರಹಸ್ಯವಾದ ವಿಶೇಷಾರ್ಥದಾಯಕವಾದ ಪದಪುಂಜಗಳಾಗಿರುತ್ತವೆ….
ಹಾಗಾಗಿ ನಮ್ಮ ಪೂರ್ವಿಕರಾದ ಋಷಿಮುನಿಗಳ, ಆಚಾರ್ಯ ಚಾಣಕ್ಯರಂತಹಾ ಮಹಾತ್ಮರ ಜ್ಞಾನ ಸಂಶೋಧನೆಗಳು ಯಥಾವತ್ತಾಗಿ ಸಮಾಜಕ್ಕೆ ಸಿಕ್ಕಬೇಕು. ಅದರಿಂದ ಸಮಾಜಕ್ಷೇಮವಿದೆ. ಲಾಭವಿದೆ. ಅದನ್ನು ಹೊರತರುವ ನನ್ನ ಪ್ರಯತ್ನ ಕೇವಲ ಬಾಲಿಶ. ಆದರೆ ಕನ್ನಡದ ಘಟಾನುಘಟಿಗಳು ಈ ಮುಖದಲ್ಲಿ ಚಿಂತಿಸಲಿ ಎಂದು ಹಾರೈಸುತ್ತಾ ಈ ಲೇಖನವನ್ನು ಮುಗಿಸುತ್ತಿದ್ದೇನೆ. ಸರ್ವರಿಗೂ ಮಂಗಳ ಉಂಟಾಗಲೀ ಎಂದು ಹಾರೈಸುತ್ತೇನೆ.
Vol 12, 52 Pages, ಆಗಸ್ಟ್ 2011 – ದೇಶದ ಜನಮಾನಸ ಸ್ಥಿತಿ, ರಾಜವಿಕಸ್ಥಿತಿ, ಭ್ರಷ್ಟತೆಗಳು – ರಾಜ ಪ್ರತ್ಯೆಕ್ಷ ದೇವತಾ ಹೇಗೆ?
ಈ ಲೇಖನ ಕುರಿತು ಎರಡು ಮಾತು ಹೇಳ ಹೊರಟಾಗ ಈ ದೇಶದ ಜನಮಾನಸ ಸ್ಥಿತಿ, ರಾಜವಿಕಸ್ಥಿತಿ, ಭ್ರಷ್ಟತೆ, ಬುದ್ಧಿಜೀವಿಗಳೆಂಬವರ ಬಾಲ ಬಡುಕತನ, ಅಮೇಧ್ಯ ತಿನ್ನುವಿಕೆ ನೋಡಿ ಮನನೊಂದು ಕೆಲವು ಮುಖ್ಯವಿಷಯಗಳನ್ನು ಈ ಪದ್ಯರೂಪದಲ್ಲಿ ಬರೆದು ಬಿನ್ನವಿಸಿದ್ದೇನೆ. ಅರ್ಥಮಾಡಿಕೊಳ್ಳಿ.
ನಂತರ ದೇಶದ ಅಭಿವೃದ್ಧಿಗೆ ಬೇಕು ಉತ್ತಮವಾದ ರಾಜ್ಯಶಾಸ್ತ್ರ ಜ್ಞಾನ. ಅದು ನಮ್ಮ ದೇಶದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳ ಅನುಕರಣೆಯಾಗುತ್ತಿದೆ. ರಾಜ್ಯಶಾಸ್ತ್ರವು ಅನುಕರಣೀಯವಲ್ಲ. ಸ್ವಾಭಾವಿಕ, ಪ್ರಾಕೃತಿಕ, ಪ್ರಾದೇಶಿಕ, ಪ್ರಪಂಚಕ್ಕೆಲ್ಲಾ ಒಂದು ಏಕ ಶಾಸ್ತ್ರೀಯತೆ ತರಲು ಸಾಧ್ಯವಿಲ್ಲ. ಅದು ಭಿನ್ನ ಭಿನ್ನ ಪ್ರಕೃತಿ ಆಧರಿಸಿ ಸಂಸ್ಕೃತಿಯ ಆಧಾರದಲ್ಲಿ ರೂಪುಗೊಳ್ಳಬೇಕಾದ ಸಂವಿಧಾನ. ಅದನ್ನು ತಿಳಿದುಕೊಳ್ಳುವ ಶಿಕ್ಷಣವಿಲ್ಲ. ಸದಭಿಪ್ರಾಯವೂ ಇಲ್ಲ. ಸ್ವಾತಂತ್ರ್ಯ ಪೂರ್ವದ ದೇಶಭಕ್ತರ ಗಣನೆಯಲ್ಲಿ ಅಂತಹಾ ಒಬ್ಬ ದೇಶಭಕ್ತನೂ ಕಾಣಸಿಗುತ್ತಿಲ್ಲ. ಸ್ವಾತಂತ್ರಾ ನಂತರ ಕೇವಲ 65 ವರ್ಷಗಳಲ್ಲಿ ಪೂರ್ತಾ ಸ್ವಾರ್ಥ, ಭ್ರಷ್ಟತನ, ಮೋಸ, ವಂಚನೆಗಳೇ ತುಂಬಿದ ರಾಜಕಾರಣದಲ್ಲಿ ವಿಶೇಷವಾಗಿ ಏನನ್ನೂ ನಿರೀಕ್ಷಿಸಲು ಅಸಾಧ್ಯವಾಗಿದೆ. ಇಂತಹಾ ಪರಿಸ್ಥಿತಿಯಲ್ಲಿ ಯಾಗಮುಖದಲ್ಲಿ ಕಂಡ ಇಲ್ಲಿಯವರೆಗೆ ಗೌಪ್ಯವೂ, ರಹಸ್ಯವೂ ಆಗಿದ್ದ ಕೆಲ ರಾಜ್ಯ ಸೂತ್ರ ಮತ್ತು ನ್ಯಾಯಸೂತ್ರಗಳನ್ನು ಕನ್ನಡ ಭಾಷೆಗೆ ಭಾಷಾಂತರಿಸಿ ಬರೆಯುವ ಪ್ರಯತ್ನ ಮಾಡಿದ್ದೇನೆ. ವಿದ್ವಜ್ಜನರು ಇದನ್ನು ಓದಿ ಸಾರ್ಥಕ ಪಡಿಸಿಕೊಳ್ಳಲಿ ಎಂಬುದು ಇದರ ಆಶಯವಷ್ಟೆ. ಇದರಲ್ಲಿ ನ್ಯಾಯಸೂತ್ರದ ಮೂರನೇ ಒಂದು ಭಾಗ ಅರ್ಥಾಂಗನ್ಯಾಯಸೂತ್ರವೆಂದು ಮಾತ್ರ ಬರೆದಿದ್ದೇನೆ. ಅದನ್ನು ಹೆಸರಿಸಿದೆ. ಇನ್ನುಳಿದ ಅಪರಾಧ ಪ್ರಕರಣ, ಆಸ್ತಿವಿವಾದ ಪ್ರಕರಣ, ಹಕ್ಕು ಬಾಧ್ಯತೆ ಪ್ರಕರಣವೆಂಬ ಉಳಿದ ಭಾಗ ಪ್ರಕಟಿಸಲು ಮುಂದೆ ಪ್ರಯತ್ನಿಸುತ್ತೇನೆ. ವೈಶ್ರವಣನೆಂಬ ಒಬ್ಬ ಅರಸನಿಗೆ ರಾಜ್ಯಾಡಳಿತದಲ್ಲಿ ಹಿಡಿತ ತಪ್ಪಿದಾಗ ಗರ್ಗಮುನಿಯಿಂದ ಬೋಧಿಸಲ್ಪಟ್ಟು ನಂತರ ಸಮರ್ಥವಾಗಿ ರಾಜ್ಯವಾಳಿದ ಎಂಬುದು ಕಥಾ ಸನ್ನಿವೇಶ. ಹಲವು ಬಾರಿ ಓದಿ ಅರ್ಥಮಾಡಿಕೊಳ್ಳಿರೆಂದು ಬಿನ್ನವಿಸುತ್ತಾ ಮುಗಿಸುತ್ತಿದ್ದೇನೆ.
Vol 13, 52 Pages, ಆಗಸ್ಟ್ 2011 – ಸಮಾಜದಲ್ಲಿರುವ ದುರಾಸೆ, ಮರೆ, ಮೋಸ, ವಂಚನೆಗಳಿಗೆ ಸ್ವತಃ ಲೇಖಕರೆ ಅನುಭವಿಸಿ ಬರೆದ ಸತ್ಯವಿಚಾರಗಳು.
ಈ ಹದಿಮೂರನೇ ಸಂಹಿತೆಯು ನೀತಿಸಂಹಿತೆ ರೂಪದಲ್ಲಿ ವಚನ ಪದಗಳಾಗಿ ಬರೆದಿರುತ್ತೇನೆ. ಇದರಲ್ಲಿ ಸ್ವಾನುಭವ ವಾಕ್ಯಗಳು ನನ್ನ ಸ್ವಂತ ಜೀವನದಲ್ಲಿ ಕಂಡುಕೊಂಡ ಸತ್ಯಗಳನ್ನೇ ಉದಾಹರಿಸಿರುತ್ತೇನೆ. ಮುಖ್ಯವಾಗಿ ಸಮಾಜದಲ್ಲಿರುವ ದುರಾಸೆ, ಮಲೆ, ಮೋಸ, ವಂಚನೆಗಳಿಗೆ ಸ್ವತು ನಾನೇ ಈಡಾಗಿ ಆ ಮೋಸ ಹೋದವರ ನೋವನ್ನು ಅನುಭವಿಸಿ ಬರೆದ ಸತ್ಯವಿಚಾರಗಳಿವು. ಸಮಾಜದ ನೈತಿಕ ಮಟ್ಟಗ ಪೂರ್ತಿ ದಿಗಕುಸಿದಿದ್ದೆ ಆದರೆ ” ಅದು ಸಮಾಜಕ್ಕೆ ಅರ್ಥಮಾಡಿಕೊಳ್ಳಲಾಗದಷ್ಟು ಅಜ್ಞಾನವಿದೆ. ಎಲ್ಲೋ ಕೆಲವೇ ಜನ ರಾಜಕಾರಣಿಗಳು, ಬುದ್ಧಿಜೀವಿಗಳು, ಅಧ್ಯಾತ್ಮವಾದಿಗಳು ತಮ್ಮ ಲಾಭಕ್ಕಾಗಿ ಇಡೀ ಸಮಾಜವನ್ನು ಅಧೋಗತಿಗೆಳೆಯುತ್ತಿದ್ದಾರೆ. ಜನರಿಗೆ ಇದು ಅರ್ಥವಾಗಲು ಸಾಧ್ಯವೇ ಇಲ್ಲ. ಕಾರಣ ಅವರಿಗೆ ಸಿಗುತ್ತಿರುವ ನಿಷ್ಟ್ರಯೋಜಕ ವಿಧ್ಯೆ ಬದುಕಿನ ಎಲ್ಲಾ ಸ್ಥರಗಳನ್ನೂ ತೆರೆದು ಬಿಚ್ಚಿ ತೋರಿಸಬಲ್ಲ ಆಧ್ಯಾತ್ಮದ ಸೆರಗಿನಲ್ಲಿ ವಿಧ್ಯೆ ಇರಬೇಕೇ ವಿನಃ ಯಾವುದೋ ಭ್ರಷ್ಟ ರಾಜಕಾರಣಿಯ ಅಭಿಪ್ರಾಯವಾಗಬಾರದು. ಮತ್ತು ಬುದ್ಧಿಜೀವಿಗಳೆಂದು ಹಣೆಪಟ್ಟಿ ಕಟ್ಟಿಕೊಂಡ ಜನರ ಸ್ವಹಿತಾಸಕ್ತಿಗೂ ಬಲಿಯಾಗಬಾರದಲ್ಲವೆ? ಅಂತಹಾ ಉತ್ತಮ ವಿಧ್ಯೆಯ ಒಂದು ಭಾಗವೇ “ನೀತಿಪಾಠವೆಂಬ” ಒಂದು ಭಾಗ ಈಗ ಅದು ಶಾಲೆಯಲ್ಲಿ ಶಿಕ್ಷಣದಲ್ಲಿ ಸಂಪೂರ್ಣ ತೆಗೆದು ಹಾಕಿದೆ ಸರಕಾರ. ಕಾರಣ ಜನರು ಬುದ್ಧಿವಂತರಾದರೆ ಆಳುವುದು ಕಷ್ಟ ಮತ್ತು ಬುದ್ದಿಜೀವಿಗಳೆಂಬುವರ ತಲೆಯ ಲದ್ದಿಯ ವಾಸನೆ ತಿಳಿಯುತ್ತದೆ. ಹಾಗಾಗಿ ಈ ಎರಡೂ ಜನರೊಟ್ಟಾಗಿ ಬಲವಂತವಾಗಿ ಶಿಕ್ಷಣದ ಮಟ್ಟ ಈ ರೀತಿ ಕೆಳಗಿಳಿಸಿದ್ದಾರೆ. ಇದು ನಮ್ಮ ದೌರ್ಭಾಗ್ಯವೇ ಸರಿ.
ಇನ್ನು ಆಧ್ಯಾತ್ಮಿಕತೆ ಸಮಾಜಕ್ಕೆ ಸನ್ಮಾರ್ಗದರ್ಶನ ಮಾಡಬೇಕಾದ ಮಠಮಾನ್ಯಗಳು ಕೂಡಾ ಕುಲಗೆಟ್ಟ ವಿಧ್ಯಾಪ್ರಸಾರವೆಂಬ ನಾಟಕ ಮಾಡುತ್ತಾ ಕೋಟಿ ಕೋಟಿ ಹಣ ಬಾಚುತ್ತಿದ್ದಾರೆ. ಸತ್ಯ, ಧರ್ಮ, ನ್ಯಾಯ, ಆಧ್ಯಾತ್ಮಿಕ, ಆತ್ರೋನ್ನತಿ ಬೋಧಿಸುವುದನ್ನು ಬಿಟ್ಟು ಕೋಟಿ ಕೋಟಿ ಡೊನೇಷನ್ ಬರುತ್ತದೆ ಎಂಬ ಕಾರಣಕ್ಕೆ ವೈದ್ಯಕೀಯ, ತಾಂತ್ರಿಕ ಭಾಗದಲ್ಲಿ ಮುನ್ನುಗ್ಗುತ್ತಿವೆ. ಮಠಗಳು ಹೀಗಾದರೆ ಸಮಾಜದ ಸ್ಥಿತಿ ಅಧೋಗತಿ. ಇದಕ್ಕಾಗಿ ಯೋಚಿಸಿದ ನಮ್ಮ ಸಂಸ್ಥೆ ಸಣ್ಣ ಪ್ರಮಾಣದಲ್ಲಿ ನೀತಿ ಬೋಧಕ ಸಾಹಿತ್ಯ ಪ್ರಕಟಣೆ ಉದ್ದೇಶದಿಂದ “ಯತ್ವಿಕ್‌ವಾಣಿ”ಯೆಂಬ ಪತ್ರಿಕೆ ಮಾಸಿಕವಾಗಿ ಪ್ರಕಟಿಸುತ್ತಾ ಈ ರೀತಿಯ ಇತರೆ ಸಾಹಿತ್ಯಗಳನ್ನು ಪ್ರಕಟಿಸುತ್ತಿದೆ. ಈ ಸಾರಿಯ ಈ ಲೇಖನವೂ ವಚನ ಸಾಹಿತ್ಯದಂತೆಯೇ ಬೋಧಪ್ರದ ವಿಚಾರಗಳು ಅಡಕವಾಗಿವೆ. ಓದಿ ಅರ್ಥಮಾಡಿಕೊಂಡು ತಮ್ಮಲ್ಲಿ ಅಳವಡಿಸಿಕೊಂಡಲ್ಲಿ ಶುಭವಾಗುತ್ತದೆ ಎಂದೂ, ಭಗವಂತನು ನಿಮಗೆಲ್ಲರಿಗೂ ದಾರಿ ತೋರಲೆಂದೂ ಹಾರೈಸುತ್ತಾ ಈ ಲೇಖನ ಬರೆಹ, ಪ್ರಕಟಣೆ, ಹಂಚುವಿಕೆಯಲ್ಲಿ ಕೈಗೂಡಿಸಿದ ಎಲ್ಲಾ ಋತ್ವಿಕ್‌ವಾಣಿ ಬಳಗದ ಸದಸ್ಯರಿಗೂ ಭಗವದನುಗ್ರಹ ಪ್ರಾಪ್ತವಾಗಲೆಂದು ಹಾರೈಸುತ್ತೇನೆ.
Vol 14 , 52 Pages, ಆಗಸ್ಟ್ 2011 – ಜಗತ್ತನ್ನು ಹೇಗೆ ಋಣ ಕರ್ಮಗಳು ಆಳುತ್ತವೆ? – ಬ್ರಹ್ಮ ವೈವರ್ತ ಪುರಾಣ
ಬ್ರಹ್ಮ ವೈವರ್ತಪುರಾಣ ಒಂದು ಸಣ್ಣ ಪಾತ್ರ ಪೂರ್ಣ ವಿಶ್ಲೇಷಣೆಯೊಂದಿಗೆ ಜಗತ್ತನ್ನು ಹೇಗೆ ಋಣ ಕರ್ಮಗಳು ಆಳುತ್ತವೆಯೆಂಬುದನ್ನು ವಿವರಿಸುವ ಈ ಲೇಖನ ಸಿದ್ಧಪಡಿಸಿದ್ದೇನೆ. ಅದನ್ನೇ ವಿಧಿಯಾಟವೆಂದು ಹೇಳುವುದು. ಮಾನವನು ವಿಧಿಯೆಂಬ ತನ್ನದೇ ಆದ ಕರ್ಮಕ್ಕೆ ಹೆದರಬೇಕಿಲ್ಲ. ಅದು ಹೇಗೆ ನಡೆಸುತ್ತದೋ ನಡೆಸಲಿ. ಆದರೆ ತಾನು ಕಲಿತ ವಿಧ್ಯೆ ಮುಖೇನ ಯುಕ್ತಾಯುಕ್ತತೆ ಅರಿತು ವ್ಯವಹರಿಸಬೇಕಷ್ಟೆ. ತನ್ನ ಸುತ್ತಿನ ಪ್ರಪಂಚ ತನ್ನ ಸ್ನೇಹಿತ, ಅದರ ಹಿತದೊಂದಿಗೆ ತನ್ನ ಬಾಳ್ವೆಯಿರಬೇಕು ಎಂದು ತಿಳಿದಿದ್ದರೆ ಸಾಕು. ಸುತ್ತಿನ ಸಕಲ ಜೀವಿಗಳೂ ನಮ್ಮ ಸಮಾನ. ಅವುಗಳನ್ನು ಅವಷ್ಟಕ್ಕೆ ಬದುಕಲು ಬಿಡಿ. ಯಾವುದೇ ಕಾರಣಕ್ಕೂ ಜೀವ ಹಿಂಸೆ ಮಾಡಬೇಡಿ. ಇದೇ ಕಥಾಸಾರಾಂಶ. ಮುಖ್ಯವಾದ ಅಹಿಂಸಾತ್ಮಕವಾದ. ಸದಾ ಚಲನೆಯಲ್ಲಿರುವ ಕ್ಷಣಕ್ಷಣಕ್ಕೂ ಪರಿವರ್ತನೀಯವಾದ ಈ ಪ್ರಪಂಚ ಪ್ರಕೃತಿಯ ಪರಿವರ್ತನೀಯ ಗುಣದಿಂದಲೇ ಪ್ರಕಟವಾಗಿ ಬೆಳೆಯುತ್ತದೆ. ಹಾಗಾಗಿ ಸದಾ ಉತ್ತಮವೊ ದೂಷಿತವೊ ಕರ್ಮ ಘಟಿಸುತ್ತಲೇ ಇರುತ್ತದೆ. ಅದನ್ನೇ ಋಣವೆಂದು ಹೇಳುವುದು. ಬೆಳಿಗ್ಗೆ ತಿಂಡಿ ತಿನ್ನುತ್ತೇವೆ ಅದು ಜೀರ್ಣವಾಗುತ್ತಲೇ ಇರುತ್ತದೆ. ತಿಂಡಿ ತೂಕದಷ್ಟಾದರೂ ಕಾರ್ಯ ಕರ್ತವ್ಯ ನಿರ್ವಹಣೆ ಮಾಡದಿದ್ದರೂ ಕಾಲನಧೀನವಾಗಿ ಪ್ರಕೃತಿ ಮಧ್ಯಾಹ್ನಕ್ಕೆ ಪುನಃ ಹಸಿವಾಗುತ್ತದೆ. ಹಾಗಿದ್ದರೆ ಹಿಂದೆ ತಿಂದ ತಿಂಡಿಯೇನು? ಅದೇ ಋಣ. ಆ ಶಕ್ತಿಯಿಂದ ಮಾಡಿದ ಉತ್ತಮ ಕೆಲಸವೇ ಕರ್ಮ. ಅದರ ಫಲಿತವೇ ಪಾಪ ಅಥವಾ ಪುಣ್ಯ. ಆದರೆ ಉತ್ತಮವೆಂದು ತಿಳಿದ ಕೆಲಸವೆಲ್ಲಾ ಪುಣ್ಯಕರವಲ್ಲ. ಅದು ಕರ್ಮಸಿದ್ಧಾಂತ. ಪರಿಣಾತ್ಮಕ ಸೈದ್ಧಾಂತಿಕ ಚಿಂತನೆಯಲ್ಲಿ ಪಾಪ ಪುಣ್ಯ ನಿರ್ಧಾರಿತವಾಗುತ್ತದೆ.
ಮೊದಲಾಗಿ ಮಾನವನು ಈ ಮತೀಯ ಭ್ರಾಂತಿ, ಸೈದ್ಧಾಂತಿಕ ಭ್ರಾಂತಿಯನ್ನು ಬಿಟ್ಟು ಮಾನವತಾ ವಾದವನ್ನು ರೂಢಿಸಿಕೊಳ್ಳಬೇಕು. ತಾನು ಬದುಕಬೇಕು ನಿಜ. ಆದರೆ ತನ್ನ ಬದುಕು ಇನ್ನೊಂದಕ್ಕೆ ಮುಳುವಾಗಬಾರದು ఎంబ ಆದರ್ಶ ನೈತಿಕ ಸಿದ್ಧಾಂತ ರೂಪಿಸಿಕೊಳ್ಳಬೇಕು. ಬರೇ ಆಸ್ತಿ ಹುಟ್ಟು ಹಾಕುವುದು ಜೀವನವಲ್ಲವೆಂಬ ಸತ್ಯ ಅರಿವಾಗಬೇಕು. ಸನ್ಮಾರ್ಗದಲ್ಲಿ ತಾನಿದ್ದರೆ ಸಿಗುವ ಆನಂದದ ರುಚಿ ಅದನ್ನು ಅನುಭವಿಸಿದವರಿಗೇ ಗೊತ್ತು. ಅಂತಹಾ ಸತ್ಕಾರ್ಯ ನಿರ್ವಹಣೆಯಲ್ಲಿ ಸದಾ ತನ್ನನ್ನು ತೊಡಗಿಸಿಕೊಳ್ಳುವುದರಿಂದ ಆತ್ಮಸಂತೃಪ್ತಿ ಸಿಗುತ್ತದೆ. ಅದರತ್ತ ಸಮಾಜ ಮುಂದುವರೆಯಲಿ. ಕರ್ಮಾಧಾರಿತ ಪ್ರಾಕೃತಿಕ ಜೀವನದಿಂದ ಪಾರಾಗಿ ಸೈದ್ಧಾಂತಿಕ ನೆಲೆಗಟ್ಟನ ಅಹಿಂಸಾತ್ಮಕ ಮಾನವತಾ ಜೀವನದಲ್ಲಿ ತೊಡಗಿರಿ ಎಂದು ಹಾರೈಸುತ್ತಾ ಈ ಲೇಖನ ಕುರಿತ ನನ್ನೆರಡು ಮಾತನ್ನು ಮುಗಿಸುತ್ತಿದ್ದೇನೆ.
Vol 15 , 48 Pages, ಏಪ್ರಿಲ್ 2012 – ಸಾಮಾಜಿಕ ಜೀವನ, ಕುಟುಂಬ ಜೀವನ, ಸತಿ-ಪತಿಯರ ಆತ್ಮೋನ್ನತಿಗಳು – ಪ್ರತಿಯೊಬ್ಬ ಸಂಸಾರಿ ತಿಳಿಯಲೇ ಬೇಕಾದ ಅಗಸ್ತ್ಯ ಲೋಪಮುದ್ರ ಸಂವಾದ.
ದೇಶದ ಒಂದು ಗಂಭೀರಸಮಸ್ಯೆಯನ್ನು ನಿವಾರಿಸಲೋಸುಗ 23032 ತಿರುಕಸಂಹಿತೆಯನ್ನು ಯಥಾಶಕ್ತಿ ವಿವರಿಸಲು ಪ್ರಯತ್ನಿಸಿದ್ದೇನೆ. ಇಲ್ಲಿ ಮುಖ್ಯವಾಗಿ ಅಗಸ್ತ ಲೋಪಾಮುದ್ರೆಯರ ಸಂವಾದ ರೀತಿಯಲ್ಲಿ, ಅಗಸ್ತ್ರರ ಉಪದೇಶವೆಂಬ ರೀತಿಯಲ್ಲಿ ಬರೆಯಲಾಗಿದೆ. ಇಲ್ಲಿ ಮುಖ್ಯವಾಗಿ ಸಂಸಾರದ ಸಾರ, ಅನ್ನೋನ್ನತಿ, ಸಾಮಾಜಿಕ ಉದ್ದೇಶವನ್ನು ವೇದಮೂಲದ ಆದರ್ಶದೊಂದಿಗೆ ಸೇರಿಸಿ ಯಥಾಶಕ್ತಿ ವಿಮರ್ಶಿಸಿ ಕೆಲ ಮುಖ್ಯ ನಿಬಂಧನೆಯ ಕಟ್ಟುಪಾಡಿನಲ್ಲಿ ಬರೆಯಲಾಗಿದೆ. ಈಗಿನ ಕಾಲಮಾನ ಆಧರಿಸಿ ಸಾಮಾಜಿಕ ಜೀವನ, ಕುಟುಂಬ ಜೀವನ ಪದ್ಧತಿ, ಸತಿ-ಪತಿಯರ ಅಮ್ಮೋನ್ನತಿ, ಸಾಂಸಾರಿಕ ಬದ್ಧತೆ, ಗೌಪ್ಯತೆಗಳೆಲ್ಲಾ ಅರ್ಥಹೀನವಾಗಿ ಒಟ್ಟಾರೆ ಸಮಾಜ ದಿಕ್ಕುತಪ್ಪಿ ಎಲ್ಲೆಲ್ಲೋ ಹೋಗುತ್ತಿದೆ. ಬುದ್ಧಿಜೀವಿಗಳೆಂದು ಕರೆಸಿಕೊಳ್ಳುವ ಮೂರ್ಖ ವಿಶಾಲವಾದಿಗಳು ವ್ಯಾಖ್ಯಾನಿಸುವ ಭ್ರಷ್ಟ ವಿಚಾರವಾದದಲ್ಲಿ ಸ್ತ್ರೀ ಸ್ವಾತಂತ್ರ್ಯ ಸಿಕ್ಕಿ ನರಳುತ್ತಿದೆ. ಸ್ವಾತಂತ್ರ್ಯ ವೆಂದರೇನೆಂದೇ ಅರ್ಥ ಗೊತ್ತಿಲ್ಲದ ಮೇಲೆ ವ್ಯಾಖ್ಯಾನಕ್ಕೆ ಏನು ಅರ್ಥವಿದ್ದೀತು? ಒಟ್ಟಾರೆ ಭಾರತೀಯ ಸಂಸ್ಕೃತಿಯ ದಾಂಪತ್ಯ ಜೀವನ ಪದ್ಧತಿ, ಅದರ ಆಧಾರಿತ ಗೃಹಸ್ಥಾಶ್ರಮ ಸಂಪೂರ್ಣ ನಾಶದತ್ತ ಹೋಗುತ್ತಿದೆಯೆಂದು ಕಂಡುಕೊಂಡು ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಈ ಸಣ್ಣಪ್ರಯತ್ನ ಮಾಡಿದ್ದೇನೆ.
ಒಟ್ಟು ಭಾರತೀಯತೆಯೆಂಬ ಉತ್ತಮ ಆದರ್ಶ ಯುಕ್ತವಾದ ಜೀವನಪದ್ಧತಿ ಆಶ್ರಯಿಸಿರುವುದು ಗೃಹಸ್ಥಾಶ್ರಮವನ್ನು. ಇದನ್ನು ಆಶ್ರಯಿಸಿ ಬ್ರಹ್ಮಚಾರಿ, ವಾನಪ್ರಸ್ಥ, ಸನ್ಯಾಸಗಳು ಬದುಕಿವೆ. ಗೃಹಸ್ಥಾಶ್ರಮ ನಿರ್ಬಲವಾದರೆ ಉಳಿಕೆ ಆಶ್ರಮ ನಿರ್ಜಿವ. ಬದುಕಿದ್ದೂ ಸತ್ತಂತೆ. ಬದುಕಿರುವ ಸಾಧ್ಯತೆ ಇಲ್ಲವೆಂದೇ ಹೇಳಬಹುದು. ಹಾಗಾಗಿ ಒಂದು ಸಂಸ್ಕೃತಿಯೇ ನಾಶವಾಗಬಹುದು. ಹಾಗಾಗದಂತಿರಬೇಕಾದಲ್ಲಿ ಗೃಹಸ್ಥಾಶ್ರಮಧರ್ಮ ಉಳಿಯಬೇಕು. ಸದೃಢವಾಗಿರಬೇಕು. ಅದಕ್ಕೆ ಉತ್ತಮ ಶಿಕ್ಷಣ ಬೇಕು. ವಿದೇಶೀ ಲೋಲುಪತೆಯ ಜೀವನಪದ್ಧತಿಯನ್ನು ತ್ಯಾಗ ಮಾಡಬೇಕು. ಶುದ್ಧ ಸರಳಜೀವನವನ್ನು ಆಶ್ರಯಿಸಬೇಕು. ಅದನ್ನೇ ಬರೆಯಲು ಪ್ರಯತ್ನಿಸಿದ್ದೇನೆ. ಹಲವು ಬಾರಿ ಓದಿ ಅರ್ಥ ಮಾಡಿಕೊಂಡಲ್ಲಿ ಸಾರ್ಥಕವೆಂದು ತಿಳಿಯುತ್ತೇನೆ.
ಇನ್ನು ಈ ನಾಲ್ಕು ಪಾದಗಳಲ್ಲಿ ಒಂದು ವಿಶೇಷ ಪ್ರಸ್ತಾರಪಂಕ್ತಿಯೆಂಬ ಛಂದೋವಿಶೇಷವನ್ನು ಅಳವಡಿಸಿದ್ದೇನೆ. ಇದರಲ್ಲಿ ಮೂರು ಪಾದಗಳು ನಿಚ್ಛತ್ ಆಗಿಯೂ ಒಂದು ಪಾದ ಪಂಕ್ತಿಯಾಗಿಯೂ ಇರುತ್ತದೆ. ಅದರಲ್ಲಿ ನಿಕೃತ್ ಉಚ್ಚಾರದಿಂದ ಒಂದು ಸ್ವರತರಂಗ ಪ್ರವಹನ ಆರಂಭಿಸಿ ಪಂಕ್ತಿಯಲ್ಲಿ ಛೇದನಗೊಂಡು ಸ್ಥಾಯಿಯಾಗುತ್ತದೆ. ತನ್ಮೂಲಕ ಸ್ಥಿರತೆ ಪ್ರಚೋದಿಸಲ್ಪಟ್ಟು ದಾಂಪತ್ಯದ ಬದ್ಧತೆಗೆ ಬಲ ಬರುತ್ತದೆ. ಹಾಗೆ ಈ ರಚನೆ ಇರುತ್ತದೆ. ಇದು ಸಮಾಜಕ್ಕೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಪ್ರಯತ್ನಿಸಿದ್ದೇನೆ. ಇವೆಲ್ಲದರ ಪ್ರಯೋಜನ ಸಮಾಜವು ಪಡೆಯಲೆಂದು ಹಾರೈಸುತ್ತಿದ್ದೇನೆ.
Vol 16 , 52 Pages, ಅಕ್ಟೋಬರ್ 2012 – ಅತೀ ನಿಖರತೆ ಮತ್ತು ಸತ್ಯ ವಿಚಾರಗಳ ವಿಮರ್ಶೆ ನಡೆದ ಒಂದು ಶಾಸ್ತ್ರವೆಂದರೆ ಅದು ಸಾಂಖ್ಯಶಾಸ್ತ್ರ.
ಈ ತಿರುಕ ಸಂಹಿತೆಯಲ್ಲಿ ನಗಧರನೆಂಬ ಒಬ್ಬ ಪುರಾತನ ಸೂತ್ರಕಾರನ ಅದರಲ್ಲೂ ಸಾಂಖ್ಯಶಾಸ್ತ್ರಕಾರನ ಬರೆಯಲಾಗಿದೆ. ವಿಚಾರವಾಗಿ
ಇಲ್ಲಿ ಮುಖ್ಯವಾಗಿ ಭಾರತೀಯ ಶಾಸ್ತ್ರಗಳಲ್ಲಿ ಅತೀ ನಿಖರತೆ ಮತ್ತು ಸತ್ಯ ವಿಚಾರಗಳ ವಿಮರ್ಶೆ ನಡೆದ ಒಂದು ಶಾಸ್ತ್ರಗ್ರಂಥವೆಂದರೆ ಸಾಂಖ್ಯಶಾಸ್ತ್ರ. ಇದರಲ್ಲಿ ಯಾವುದೇ ಹೊಂದಾಣಿಕೆ ಇಲ್ಲದೇನೇ ಸತ್ಯ ಮತ್ತು ಸ್ಪಷ್ಟ ನಿಖರ ವಿಚಾರ ಮಂಡಿಸಲ್ಪಟ್ಟಿದೆ. ಇದು ಎಲ್ಲಿಯೂ ಎರಡು ಅಭಿಪ್ರಾಯಗಳಿಗೆ ಅವಕಾಶವನ್ನು ಕೊಟ್ಟಿಲ್ಲ. ಒಡಂಬಡಿಕೆಗೆ ಅವಕಾಶವೇ ಇಲ್ಲ. ಎರಡಕ್ಕೆ ಎರಡು ಕೂಡಿದರೆ ಯಾರೇ ಹೇಳಿದರೂ, ಯಾವ ಕಾಲದಲ್ಲಿ ಹೇಳಿದರೂ ನಾಲ್ವೇ ಉತ್ತರ. ಯಾವುದೇ ಕಾರಣದಿಂದ ಅದು ಐದು ಅಥವಾ ಮೂರು ಆಗಲು ಸಾಧ್ಯವೇ ಇಲ್ಲ. ಇದು ಸಾಂಖ್ಯಶಾಸ್ತ್ರದ ವಿಶೇಷತೆ. ಈ ಸಾಂಖ್ಯಶಾಸ್ತ್ರ ಹುಟ್ಟಿದ್ದು ನಗಧರನಿಂದ. ನಂತರ ಹಲವು ಸಾಂಖ್ಯಪ್ರವೀಣರು ಆಗಿ ಹೋಗಿದ್ದಾರೆ. ಆದರೆ ಮೂಲಪುರುಷ “ನಗಧರ” ಇದು ಸತ್ಯ.
ಇಲ್ಲಿ ನಗಧರನು ಸತ್ಯವನ್ನೇ ತನ್ನ ವೃತವಾಗಿಟ್ಟುಕೊಂಡ ದೃಢವೃತಳಾದ ಒಬ್ಬ ತಾಯಿಯ ಹೊಟ್ಟೆಯಲ್ಲಿ ಧರ್ಮನೇ ಶಿಶುವಾಗಿ ಹುಟ್ಟಿ ಬಂದು ಈ ಸಾಂಖ್ಯಶಾಸ್ತ್ರ ಪ್ರವರ್ತಕನಾದ ಎಂಬುದು ವಿಶೇಷ. ಅಂದರೆ ಸಾಂಖ್ಯಶಾಸ್ತ್ರ ಎಷ್ಟು ನಿಖರವೆಂಬುದಕ್ಕೆ ಇದೊಂದು ಉದಾಹರಣೆ. ಆ ಶಾಸ್ತ್ರ ಪ್ರವರ್ತಕನೂ ತಾನು ಸತ್ಯವೃತ ಮಾತ್ರನಲ್ಲ, ತನ್ನನ್ನು ಹೆತ್ತ ತಾಯಿಯೂ ಸತ್ಯವೃತಳಾಗಿರಬೇಕು. ಸತ್ಯಕ್ಕಾಗಿ ತನ್ನ ಪ್ರಾಣವನ್ನೇ ಬಿಟ್ಟಂತಹಾ ಮಹಾತಾಯಿಯ ಉದರದಲ್ಲಿ ಜನಿಸಿ ಬಂದವನಾಗಿದ್ದಾನೆ ಎಂದರೆ ಅದರರ್ಥ ಸಾಂಖ್ಯದರ್ಶನ ಪ್ರತಿಪಾದಕರ ಸತ್ಯನಿಷ್ಠೆ ಎಷ್ಟೆಂದು ಅರ್ಥ ಮಾಡಿಕೊಳ್ಳಿರಿ. ಸ್ವತಃ ಧರ್ಮಮೂರ್ತಿಯು ತಾನೇ ತನಗಾಗಿ ಕ್ಷೇತ್ರ ನಿರ್ಣಯಿಸಿ ಹುಟ್ಟಿ ಬಂದು ಯಾವ ಬಾಂಧವ್ಯದ ಬಂಧನವೂ ಇಲ್ಲದೇ ಬೆಳೆದು ಪುರಾತನರಲ್ಲಿ ಪುರಾತನರಾದ ಅಗಸ್ತರಿಂದ ಉಪದೇಶ ಪಡೆದು ತಪಸ್ಸನ್ನು ಆಚರಿಸಿ ಸಿದ್ದಿ ಮಾಡಿಕೊಂಡು ಅತೀ ನಿಖರ ಮತ್ತು ಬದ್ಧ ವಿಚಾರವನ್ನು ಶಾಸ್ತ್ರೀಯವಾಗಿ ಪ್ರಮೇಯ, ಉಪಮೇಯ, ಸಮೀಕರಣ, ಬೀಜನ್ಯಾಸ, ಖಂಡೋಪಕರಣ, ವ್ಯವಕಲನ, ಸಂಕಲನ, ಶೂನ್ಯಕಸಿದ್ಧಾಂತ, ಷೋಡಶೀ ಸೂತ್ರ, ಪಂಚದಶೀ ಸೂತ್ರ, ಷಣ್ಣವತೀ ಸೂತ್ರ, ಅಶೀತಿ ಸೂತ್ರ, ವರ್ಗೊತ್ತಮಾಂಶ ಸೂತ್ರ, ಅವರ್ಗೀಯ ಸೂತ್ರ, ಭಾಜನ ಸೂತ್ರ, ಗುಣಕ ಸೂತ್ರಗಳೆಂಬ ಹದಿನಾರು ವಿಶಿಷ್ಟರೀತಿಯ ಶ್ಲೋಕರೂಪದಲ್ಲಿ ರೂಪಿಸಿದ ನಾಲ್ಕು ಸಾವಿರದ ನಾಲ್ಕುನೂರ ನಲವತ್ತನಾಲ್ಕು ಶ್ಲೋಕರೂಪದ ಗ್ರಂಥವೇ ಎಲ್ಲಾ ಭಿನ್ನ ಭಿನ್ನ ಸಾಂಖ್ಯದರ್ಶನ ಶಾಸ್ತ್ರಗಳಿಗೂ ಮೂಲಗ್ರಂಥ. ಇದನ್ನು ಅಗಸ್ಯರು ಅರಿಯುವ ಬಗೆಯನ್ನು ಮಾತ್ರ ನಗಧರನಿಗೆ ಬೋಧಿಸಿದರೆಂದು ಹೇಳಿದೆ. ಮತ್ತೆಲ್ಲಾ ಅವನದ್ದೇ ಆದ ಸ್ವಂತ ಸಾಧನೆ. ಆದರೆ ಈ ಬಗ್ಗೆ ನಗಧರನ ಪರಿಚಯವೇ ಶಾಸ್ತ್ರಗಳಲ್ಲಿ ನಮೂದಿಸಿಲ್ಲ. ಕಾರಣ ಸಾಂಖ್ಯರೂ ಮತ್ತು ಮೀಮಾಂಸಕರೂ ಯಾವಾಗಲೂ ನಿಖರತೆಗಾಗಿ ನಿಷ್ಠರುವಾದಿಗಳು. ಹಾಗಾಗಿ ಹಿತಾಸಕ್ತಿಗಳು ಉದ್ದೇಶಪೂರ್ವಕ ಕಡೆಗಣಿಸಿದ್ದು ಕಂಡು ಬರುತ್ತದೆ. ಒಟ್ಟಾರೆ ನಂತರ ಲಭ್ಯ ಸಾಂಖ್ಯದರ್ಶನವೆಂಬುದು ಹಿತಾಸಕ್ತಿಗಳ ತಿದ್ದುಪಡಿಯ ಒಂದು ಪರಿಷ್ಕರಿತ ನಿರುಪಯುಕ್ತ ಗ್ರಂಥ ಮಾತ್ರಾವೆಂದು ಘಂಟಾಘೋಷವಾಗಿ ಹೇಳಬಹುದು. ಒಂದಷ್ಟು ಮೂಲ ಹಸ್ತಪ್ರತಿಗಳ ಹೊರತುಪಡಿಸಿ ನಗಧರ ಮೂಲ ಸಾಂಖ್ಯದರ್ಶನದ ಲಭ್ಯವಿಲ್ಲ. ಒಂದು ನಿರ್ದಿಷ್ಟ ಮಾಹಿತಿ ಮಾತ್ರಾ ಲಭ್ಯವಿದೆ. ಆದರೆ ಪ್ರಪಂಚದ ಆಗುಹೋಗುಗಳೆಲ್ಲಾ ಒಂದು ಚಿಕ್ಕ ಘಟನೆಯೂ ಕೂಡ ಹೆಚ್ಚೇಕೆ ಪ್ರಪಂಚವೇ ಒಂದು ಪ್ರಮೇಯ ಆಧರಿಸಿ ಇದೆ. ಗಣಿತಸೂತ್ರದಲ್ಲಿ ನಿಖರವಾಗಿ ದಾಖಲಿಸಲ್ಪಟ್ಟಿದೆಯೆಂದರೆ ಎಷ್ಟು ಆಶ್ಚರ್ಯ ಮತ್ತು ಸುಲಭ ಗ್ರಾಹ್ಯವಲ್ಲವೆ? ಯಾವುದೇ ಒಂದು ಕಡ್ಡಿಯೂ ಕೂಡ ಚಲಿಸಬೇಕಿದ್ದಲ್ಲಿ ಅದು ಮೊದಲೇ ಗಣಿತಸೂತ್ರ ರೀತ್ಯಾ ನಿರ್ಧಾರಿತವಾಗಿರುತ್ತದೆ. ಅದೇ ಪಂಚಭೂತಾತ್ಮಕ ಪ್ರಮೇಯಗಳೆಂದು ಹೆಸರಿಸಲ್ಪಟ್ಟಿವೆ. ಅವುಗಳನ್ನು ಅತೀ ಸೂಕ್ಷ್ಮವಾಗಿ ವಿವರಿಸುವುದೇ ಸಾಂಖ್ಯಶಾಸ್ತ್ರ ಮತ್ತು ವಿಮರ್ಶಾ ಜ್ಞಾನಗಳು. ಇದರ ಬಗ್ಗೆ ಸಂಪೂರ್ಣ ವಿವರ ಬರೆಯಲು ನಾನು ಶಕ್ತನಲ್ಲ, ಅಧಿಕಾರಿಯೂ ಅಲ್ಲ. ಆದರೆ ಯಾವುದೋ ಹಿತಾಸಕ್ತಿಯ ದುರುದ್ದೇಶ ಪೂರಿತವಾಗಿ ಕಡೆಗಣಿಸಲ್ಪಟ್ಟಿದ್ದನ್ನು ಉದ್ಘಾಟಿಸಿದ್ದೇನೆ. ಮುಂದೆ ಮುಮುಕ್ಷುಗಳು ಹೆಚ್ಚಿನ ಚಿಂತನೆ ನಡೆಸಬೇಕಿದೆ. ಒಟ್ಟಾರೆ ಸಾಂಖ್ಯರು ಜಗತ್ತಿನ ಅತಿಶ್ರೇಷ್ಠ ದರ್ಶನಕಾರರಲ್ಲಿ ಒಬ್ಬರು.
ಸಾಮಾನ್ಯವಾಗಿ ಈಗಿನ ಅಧಿಕೃತ ದರ್ಶನಗಳಾಗಿ ಪ್ರಚಲಿತವಿರುವ ಷಡ್‌ದರ್ಶನಗಳಲ್ಲಿ ಸಾಂಖ್ಯವೂ ಒಂದು. ಇದರ ನಿಖರತೆ ಮತ್ತು ಸತ್ಯ ನಿಷ್ಟುರತೆಗಾಗಿಯೇ ಅದು ಶ್ರೇಷ್ಠವಾಗಿದೆ. ಯಾವುದೇ ಒಬ್ಬ ತತ್ವಶಾಸ್ತ್ರಿಯು ತಿಳಿದಿರಬೇಕಾದ ಅಗತ್ಯ ವಿಚಾರವಾಗಿರುತ್ತದೆ. ಇಂತಹಾ ವಿಚಾರ ಪ್ರತಿಪಾದಕನ ಪರಿಚಯ ಮಾತ್ರಾ ಈಗ ಬರೆದಿರುತ್ತೇನೆ. ಇದು ಸಾಂಖ್ಯಶಾಸ್ತ್ರವಲ್ಲ. ಅದರ ಕೆಲ ಕುರುಹುಗಳು ಮಾತ್ರಾ. ಸಾಂಖ್ಯಶಾಸ್ತ್ರದ ಬಗ್ಗೆ ಮುಂದೆ ಪೂರ್ಣ ಪಾಠ ಪ್ರಕಟಿಸುವ ಅಭಿಪ್ರಾಯವಿದೆ. ಕಾದು ನೋಡಿರಿ.
Vol 17 , 60 Pages, ನವೆಂಬರ್ 2012 – ಸರ್ವಜ್ಞ, ದೇವಮಾನವರಾಗಲು ಶೃದ್ಧೆ, ಭಕ್ತಿ ಬೇಕು.
ಮಂಗನಿಂದ ಮಾನವ ಎಂದು ಆಧುನಿಕ ವಿಜ್ಞಾನ ಬೋಧಿಸುತ್ತಿದೆ. ಅನಾದಿ ಕಾಲದಲ್ಲಿ ನಾಗರೀಕತೆಯು ಇರಲಿಲ್ಲ, ಮಂಗನು ಮಾನವನಾಗುತ್ತಾ ಬಂದಂತೆ ನಾಗರೀಕತೆಯು ಬೆಳೆಯಿತು. ಅಮೇರಿಕ, ಇಂಗ್ಲೆಂಡ್ ಮುಂತಾದ ಮುಂದುವರೆದ ದೇಶಗಳು ನಾಗರೀಕತೆಯಿಂದ ತುಂಬಿ ತುಳುಕುತ್ತಿದೆ ಎಂದು ಹೇಳಿಕೊಳ್ಳುತ್ತಿದ್ದಾರೆ ಮಂಗನಿಂದ ಮಾನವರಾದ ಆ ಮನುಷ್ಯರು.
ಆಕಾಶ, ವಾಯು, ಅಗ್ನಿ, ಜಲ, ಪೃಥ್ವಿ, ಚರಾಚರ ಜೀವ ರಾಶಿಗಳು ಹೇಗೆ ಉಗಮವಾಯಿತು? ಮೊದಲು ಮನುಷ್ಯ ಹೇಗೆ ಹುಟ್ಟಿದ ಮತ್ತು ಅವನ ಜ್ಞಾನಮಟ್ಟ ನಾಗರೀಕತೆ ಹೇಗೆ ಇತ್ತು? ಹಾಗು ಯಾವ ಯಾವ ಕಾಲದಲ್ಲಿ ಹೇಗೆ ಹೇಗೆ ಪರಿವರ್ತನೆಯಾಯಿತು? ಎಂದು ಸಾರಿ ಹೇಳುತ್ತಿವೆ ಭಾರತದ ಪ್ರಾಚೀನ ಗ್ರಂಥಗಳು.
ಚೋದಕ ಚಿತ್ರವು ವ್ಯವಹರಿಸಿ ಸೃಷ್ಟಿಸುವ ಕೃತಯುಗವು ನಡೆದು ಅದರಿಂದಾದ ಋಣತ್ರಯಗಳ ವಿಮೋಚನೆ ಚಿಂತಿಸುವ ತ್ರೇತಾಯುಗವು ನಡೆದು ದಾರಿ ಕಾಣದೆ ಸ್ವರ್ಗ, ಮೋಕ್ಷವೆಂಬ ಎರಡು ಪರವನ್ನು ಅಂದರೆ ದ್ವಾಪರವನ್ನು ಅರಿಯದೆ ಸ್ವರ್ಗ, ಮೋಕ್ಷವನ್ನು ಪಡೆಯಲು ಅಶಕ್ತರಾಗಿ ತಮಗೆ ತಾವೇ ಹೋರಾಡಿ ಸತ್ತರು. ದೈವವೇ ದ್ವಾಪರ ಅದನ್ನು ಭಕ್ತಿ, ಶೃದ್ಧೆಯಿಂದ ಸಾಧಿಸಿರಿ ಎಂದರು ಅಜ್ಞಾನದ ಈ ಕಲಿಯುಗದಲ್ಲಿ.
ಯುಗದ ಸಾರಧರ್ಮವನ್ನು ಅರಿತಿರಾದರೆ ನೀವು ಸರ್ವಜ್ಞರು ದೇವಮಾನವರೂ ಆಗುವಿರಿ ಈ ಕಲಿಯುಗದಲ್ಲಿ ಎಂದು ಸಾರಿ ಹೇಳುತ್ತಿದೆ ಈ ತಿರುಕ ಸಂಹಿತೆಯು.
Vol 18 , 80 Pages, ನವೆಂಬರ್ 2012 – ನಿತ್ಯಾನಂದರಾಗಲು ದಾರಿ ದೀಪ.
ಈ ಪ್ರಪಂಚದ ಪ್ರಾಪಂಚಿಕವನ್ನಾಶ್ರಯಿಸಿ ಬದುಕುವ ಸಕಲ ಜೀವಿಗಳನ್ನು ಉದ್ದೇಶಿಸಿ ಬರೆದ ಈ ತಿರುಕ ಸಂಹಿತೆ ಕುರಿತು ಎರಡು ಮಾತು ಹೇಳುತ್ತಿದ್ದೇನೆ. ಇದನ್ನು ನಾನು ಬರೆದಿಲ್ಲ. ಧೈವೀಕತೆ ಬರೆಸಿದೆ. ವಿಚಾರ ನನ್ನದಲ್ಲ. ಸಾಹಿತ್ಯ ನನ್ನದಲ್ಲ. ಕನ್ನಡ ಭಾಷೆಯೂ ಕೂಡ ನನ್ನ ಸ್ವಂತವಲ್ಲ. ಆದರೆ 24 ವರ್ಷದಿಂದ ಈ ಕನ್ನಡನಾಡಿನಲ್ಲಿ ನೆಲಸಿ ಕನ್ನಡದ ಅನ್ನ ತಿಂದು ಸುಸಂಸ್ಕೃತ ಜನರ ಸಹೃದಯತೆಗೆ ಮನಸೋತು ಈ ಭಾಷೆಯಲ್ಲಿ ಏನಾದರೊಂದು ವಿಶೇಷತೆ ಇರಬೇಕು, ಅದರಲ್ಲಿ ನನ್ನದಾದ ಸೇವೆ ಏನಾದರೂ ಮಾಡಬೇಕೆಂಬ ಉದ್ದೇಶದಿಂದ ಸಾಧ್ಯವಾದಷ್ಟು ಪ್ರಯತ್ನ ಪೂರ್ವಕ ಎಲ್ಲೆಲ್ಲೋ ನಶಿಸಿ ಹೋದ ಕನ್ನಡ ಶಬ್ದಗಳನ್ನು ಹುಡುಕಿ ಈ ಸಾಹಿತ್ಯದಲ್ಲಿ ಪ್ರಯೋಗಿಸಲಾಗಿದೆ. ಶೇ.96 ಭಾಗವೆಲ್ಲವೂ ಕನ್ನಡ ಪುಣ್ಯವನ್ನು ಶಬ್ದಗಳೇ ಎಂದು ಘೋಷಿಸುತ್ತೇನೆ. ಆದರೆ ಈಗ ಬಳಕೆಯಲ್ಲಿಲ್ಲದ ಕೆಲವರು ಬೇರೆ ಭಾಷೆಯದೆಂದು ತಿಳಿದಿರುವ ಶಬ್ದಗಳು ಮೂಲ ಕನ್ನಡವೇ ಆಗಿರುತ್ತವೆ. ಈ ಭಾಷೆ ಮೂಲತಃ ಕರ್ಣಾಟವೆಂದಿತ್ತು. ಈಗ ಕನ್ನಡವಾಗಿದೆ. ಕಿವಿಗೆ ಇಂಪಾಗಿ ಕೇಳಿಸುವ ಭಾಷೆಯೆಂಬರ್ಥದಲ್ಲಿ (ಕರ್ಣಾಟ), ದೇಶದ ಹಲವು ಭಾಷೆಗಳ ಅಧ್ಯಯನ, ಅದರಲ್ಲಿ ಸಾಹಿತ್ಯ ರಚನೆ ಮಾಡಿದ್ದೇನೆ ಹಿಂದೆ. ಅಂದಾಜು 32 ಭಾಷೆಯಲ್ಲಿ ಅನುಭವ ಗಳಿಸಿದ್ದೇನೆ. 26 ಲಿಪಿಯಲ್ಲಿ ಬರವಣಿಗೆ ಮಾಡಬಲ್ಲೆ. ಅಲ್ಲಲ್ಲಿನ ಎಲ್ಲಾ ಸಾಹಿತ್ಯ ಪ್ರಕಾರದ ಅನುಭವಗಳನ್ನೂ ಈ ತಿರುಕ ಸಂಹಿತೆಯಲ್ಲಿ ಪ್ರಯೋಗಾತ್ಮಕ ರೀತಿಯಲ್ಲಿ ಅಳವಡಿಸುವ ಪ್ರಯತ್ನ ಮಾಡಿದ್ದೇನೆ. ಇದೊಂದು ಮುಗ್ಧಭಕ್ತನ ಕನ್ನಡಾಂಬೆಯ ಸೇವೆಯೆಂದೇ ತಿಳಿದು ಮಾಡಿರುತ್ತೇನೆ.
ಈ ಕರ್ನಾಟಕದ ವಿಶೇಷತೆ, ವಿಶಿಷ್ಟತೆ ನಾನು ಕಂಡಂತೆ ವಿವರಿಸುವುದಾದರೆ ಇಲ್ಲಿ ಲಿಖಿತ ಸಾಹಿತ್ಯಗಳಿಗಿಂತ ಜಾನಪದೀಯ ನಡೆನುಡಿಗಳಲ್ಲಿ, ಜೀವನ ಸಂಸ್ಕೃತಿಯಲ್ಲಿ, ಬೆಟ್ಟ ಕಾಡುಗಳಲ್ಲಿ, ತರಲತೆಗಳಲ್ಲಿ, ಪರಿಸರ ನಿರ್ಮಾಣಗಳಲ್ಲಿ, ನದಿನದಗಳಲ್ಲಿ, ಸಹ್ಯಾದ್ರಿ ಶ್ರೇಣಿಗಳಲ್ಲಿ ಆಗೋಚರವಾಗಿಯೂ, ಚಿಂತಕನ ದೃಗ್ಗೋಚರವಾಗಿಯೂ ಕಾಣುವ ಸಾಹಿತ್ಯಗಳು ಅಮೋಘ, ಅದ್ಭುತ, ವಿಶೇಷ, ವಿಶಿಷ್ಟ ಮತ್ತು ಪ್ರಾಕೃತಿಕ ವೈಚಿತ್ರ್ಯ. ಪ್ರಪಂಚದ ಯಾವುದೇ ಭಾಗದಲ್ಲಿ ಸ್ವಾಭಾವಿಕತೆಯಲ್ಲಿ, ಪ್ರಕೃತಿಯಲ್ಲಿ, ಸಹಜ ಸ್ವಭಾವ ಜನ್ಯ ಲೇಖನ ಚಿತ್ರಗಳು ಕಾಣಸಿಗಲಾರದು. ಇಲ್ಲಿ ಜನಮನದ ಮನೋಭೂಮಿಕೆಯಲ್ಲಿ ಅಗಾಧ ಸಾಹಿತ್ಯವಡಗಿದೆ. ಅದರ ವಿಶಿಷ್ಟತೆಯನ್ನು ಗಮನಿಸಿದ ನಾನು ಅಗ್ನಾ ವೈಷ್ಣವೀ ಯಾಗ ಮುಖೇನ ಆ ವಿಚಾರವಾಗಿ ಅಲಿಖಿತ ಪ್ರಾಕೃತಿಕ ಲಕ್ಷಣಾಧ್ಯಯನ ಮುಖೇನ ಕಂಡುಕೊಂಡ ರಹಸ್ಯಗಳೇ ಈ ಹದಿನೆಂಟು ಅಧ್ಯಾಯದಲ್ಲಿ ಪ್ರಕಟಗೊಂಡ ತಿರುಕ ಸಂಹಿತೆ. ಇದನ್ನು ಹದಿನೆಂಟು ಪುಷ್ಪ ರೂಪದಲ್ಲಿ ಸಮರ್ಪಿಸುತ್ತಿದ್ದೇನೆ ಭಕ್ತಿಯಿಂದ. ಕನ್ನಡಾಂಬೆಯ ಚರಣಕಮಲದಲ್ಲಿ
ಇಲ್ಲಿ ನಾನು ಕಂಡುಕೊಂಡ ಕೆಲ ಲಕ್ಷಣ ವಿಶೇಷ ಹೇಳುತ್ತೇನೆ ಗಮನಿಸಿ. ಸಹ್ಯಾದ್ರಿಯಲ್ಲಿ ಅಲೆದಾಡಿದರೆ ಆಚಾರ್ಯ ಶಂಕರರ, ಉಡುಪಿ ಕರಾವಳಿಯಲ್ಲಿ ಹಾಸುಹೊಕ್ಕಾಗಿರುವ ಮಧ್ವಾಚಾರ್ಯರ ಸಿದ್ಧಾಂತ, ಮೈಸೂರು ಪ್ರದೇಶದಲ್ಲಿ ರಾಮಾನುಜಾಚಾರ್ಯರ ಸತ್ವ. ಕಾಡ, ಕಲೆ ಮಡಿಕೇರಿಯಲ್ಲಿ ಭಾಗಮಂಡಲ ಕಾವೇರೀ ತೀರದಲ್ಲಿ ಅಗಸ್ತರ ಆಡುಂಬೊಲ-ತಂತ್ರ. ಉತ್ತರ ಕನ್ನಡ ಪ್ರದೇಶದಲ್ಲಿ ಭಗವಾನ್ ದೇವರಾತರ ಸ್ಮೃತಿಚಿತ್ರ. ಬಯಲು ನಾಡಿನ ಪ್ರದೇಶದಲ್ಲಿ ಬಸವಣ್ಣನವರ ಅನುಭೂತಿ ಅನುಭವ. ಕುಂದ ಕಂದರ ಜೀವನಾದರ್ಶ ಕುಂದಾಪರದಲ್ಲಿ ಹೀಗೆ ಹೆಸರಿಸುತ್ತಾ ಹೋದಲ್ಲಿ ಲಿಖಿತ ಸಾಹಿತ್ಯಕ್ಕಿಂತ ಹೆಚ್ಚಾದ ವಿಶಿಷ್ಟ ದಾಖಲೆಗಳು ಕಂಡುಬರುತ್ತವೆ. ಇಲ್ಲಿನ ದೇವಾಲಯ, ಅರಮನೆ, ಕೋಟೆ ಕೊತ್ತಲಗಳೆಲ್ಲಾ ವಿಶೇಷವೇ, ಸಾಹಿತ್ಯವೇ. ಲಿಖಿತ ಸಾಹಿತ್ಯಕ್ಕಿಂತ ಹೆಚ್ಚು ಸ್ಪಷ್ಟ, ಸತ್ಯ, ನಿಖರ. ಇಂತಹಾ ಪ್ರಕೃತಿ ಅಧ್ಯಯನದಿಂದ ಹಲವು ಸಾವಿರ ಕುರುಹುಗಳನ್ನು ಅಧ್ಯಯನ ಮಾಡಿ ಅದನ್ನು ಯಾಗದಲ್ಲಿ ಅಗ್ನಿಮುಖೇನ ವಿಮರ್ಶಿಸಿ ಇಲ್ಲಿ ಎಲ್ಲದಕ್ಕೂ ಒಂದು ವಿಶಿಷ್ಟ ಸತ್ಯ ಉತ್ತರ ಪಡೆದು ಈ ತಿರುಕ ಸಂಹಿತೆ ರಚಿಸಿದ್ದೇನೆ ವಾಗ್ಗೇವತೆಯ ಅನುಗ್ರಹದಿಂದ.
ಇದರ ಉದ್ದೇಶ ಸಮಾಜದ ಸರ್ವರಿಗೂ ಪೂರ್ಣಜ್ಞಾನ ಪಡೆಯುವಲ್ಲಿನ ದಾರಿಯಾಗಲಿ ಎಂಬುದೂ, ಸರ್ವಶಕ್ತಿಯೂ ಒಂದು ಮೂಲಚೈತನ್ಯದ ಅಡಿಯಲ್ಲಿ ವ್ಯವಹರಿಸುತ್ತದೆಯೆಂಬುದೂ, ಅದರ ಉಪಾಸನೆಯೇ ಸಕಲ ಜೀವಿಗಳ ಮೂಲೋದ್ದೇಶವೆಂದೂ ಬಿಂಬಿಸುವುದಾಗಿರುತ್ತದೆ. ಆದಷ್ಟು ಎಲ್ಲವನ್ನೂ ನಾನಾ ಕಥೆಗಳ ಮುಖೇನ ತೆರೆದಿಟ್ಟಿದ್ದೇನೆ. ಹೆಚ್ಚು ಬಾರಿ ಓದುತ್ತಾ ಅದರೊಳಕ್ಕಿಳಿಯುತ್ತಾ ಹೋದಲ್ಲಿ ಸ್ಪಷ್ಟ ಚಿತ್ರಣ ತೆರೆದುಕೊಳ್ಳುತ್ತದೆ.
ಹಲವು ಭಾಷೆಗಳಲ್ಲಿ ಕೆಲ ವಿಶಿಷ್ಟ ಪ್ರಯೋಗಗಳಿವೆ. ಅವುಗಳನ್ನು ಕನ್ನಡ ಭಾಷೆಯಲ್ಲೂ ಪ್ರಯೋಗಿಸಿದ್ದೇನೆ. ಅದನ್ನು ಅರ್ಥ ಮಾಡಿಕೊಂಡಲ್ಲಿ ಭಾಷೆಯು ವಿಶೇಷವಾಗಿ ಅಭಿವೃದ್ಧಿಯಾಗಲು ಸಾಧ್ಯ. ಅದರಲ್ಲಿ ಕ್ಷರಾಕ್ಷರ, ಕ್ಷತಾಕ್ಷರ, ಅನುಭೋಗಿ, ಬೋಗಾದಿ, ಭೈರವೀಯ, ಸುಳಾದಿ, ರಗಳೆ, ಗೀಯಗಳು, ಗೇಯಕಾರಗಳು, ಷಟ್ನದಿ, ದ್ವಿಪದಿ, ತ್ರಿಪದಿ, ವಚನ, ಚತುಷ್ಪದಿ, ಗದ್ಯಗಣಕ, ಕಂದಗಳು, ಪಾಲಿಸೂತ್ರಗಳು, ಚಿಹ್ವಾವಿಚಾರ, ಅಕ್ಷಭೇದ, ಕಿಂಕಿಣಿ ಸೂತ್ರ, ಅಕ್ಷಸೂತ್ರ, ಔಪಾಧಿಕ, ಪ್ರಮೇಯ, ಅಲಂಕಾರ, ಸಮಾಶ್ರಯ, ಆಪಾಶ್ರಯಗಳೆಂಬ ನಾನಾ ವಿಧದ ಪ್ರಯೋಗಗಳನ್ನು ಮಾಡಿದ್ದೇನೆ. ಇವುಗಳಲ್ಲಿ ಕೆಲವು ಬೇರೆ ಬೇರೆ ಭಾಷೆಯಲ್ಲಿ ಬಳಕೆಯಾಗಿದ್ದವು. ಇದರ ಉದ್ದೇಶ ವಿಚಾರ ತಿಳಿಸಬೇಕು ಜೊತೆಯಲ್ಲಿ ವಿಚಾರದ ಗೌಪ್ಯತೆ ರಹಸ್ಯ ಕಾಪಾಡಬೇಕು ಎಂಬುದಾಗಿರುತ್ತದೆ. ಕೆಲವೊಂದು ಬಾಧ್ಯತೆಗಳನ್ನೂ, ಸಾಮಾಜಿಕ ಜವಾಬ್ದಾರಿಯನ್ನೂ ಅರಿತು ಅದಕ್ಕೆ ಭಂಗವಾಗದ ರೀತಿಯಲ್ಲಿ ಇದನ್ನು ವಿಶಿಷ್ಟ ಪದ್ಯರೂಪದಲ್ಲಿ ಷಟ್ಟದಿಯಂತೆ ರಚಿಸಿರುತ್ತೇನೆ. ದ್ವಕ್ಷರೀ ಸಾಮ್ಯ ಸಾಧಿಸಿದ್ದೇನೆ. ಉಳಿಕೆ ಛಂದೋ ನಿಯಮ ಅಷ್ಟೇನೂ ಪಾಲಿಸಿಲ್ಲ. ವಿಚಾರ ಹೇಳುವುದು ಮುಖ್ಯವೇ ಅನ್ನಿಸಿದೆ ನನಗೆ. ಹಾಗಾಗಿ ಹಾಗೇ ಬರೆದಿದ್ದೇನೆ. ಅದರಲ್ಲಿ ಕೆಲವನ್ನು ವಚನವೇದದಂತೆಯೂ, ಕೆಲವನ್ನು ಭಾಮಿನೀ ಷಟ್ಟದಿಯಂತೆಯೂ, ಕೆಲವನ್ನು ಯಕ್ಷಗಾನ ರೂಪದಲ್ಲೂ, ಕೆಲವೊಂದು ಗಮಕರೂಪದಲ್ಲೂ ಹಾಡಿ ಕೆಲವರು ಧ್ವನಿ ಮುದ್ರಿಕೆ ತಯಾರಿಸಿರುತ್ತಾರೆ. ವಿಚಾರ ಬೆಳೆಯುವ ದೃಷ್ಟಿಯಲ್ಲಿ ಇದು ಪೂರಕ. ಹಾಗಾಗಿ ಅವರಿಗೆ ಕೃತಜ್ಞನಾಗಿರುತ್ತೇನೆ. ಇನ್ನು ಈ ಹದಿನೆಂಟು ಸಂಹಿತಾ ರೂಪದ ಪುಸ್ತಕ ಪ್ರಕಟಿಸಲು ಸಹಕರಿಸಿದ ಎಲ್ಲಾ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ. ಇನ್ನು ಈ ಭಾಗ ಚತುರ್ವೇದ ರಹಸ್ಯ ವಿಚಾರವಿರುತ್ತದೆ. ವೇದ ರಹಸ್ಯವನ್ನು ಮುಕ್ತವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದೇನೆ. ಒಟ್ಟು 54 ಸಮೀಕರಣವನ್ನು ಉದಾಹರಿಸಿ ವೇದರಹಸ್ಯ ಬಿಚ್ಚಿಟ್ಟಿದ್ದೇನೆ. ಇತರೆ ಸಂಹಿತೆಯಲ್ಲಿ ಬೇರೆ ಬೇರೆ ಕಡೆಯಲ್ಲಿ 30 ವಿಶಿಷ್ಟ ಸಮೀಕರಣವನ್ನು ಸೇರಿಸಿದ್ದೇನೆ. ಅವನ್ನು ಅಭ್ಯಸಿಸಿದ ಮುಮುಕ್ಷುಗಳು ಖಂಡಿತಾ ಯೋಗಿಗಳಾಗುತ್ತಾರೆ. ಈ ಭಾಗವನ್ನು ನಾನು ಮಗುವಾಗಿ ಬರೆದೆ ತಾಯಿಯಾಗಿ ವಾಣಿ ಬರೆಸಿದಳು. ಒಂದು ಕಾಲದಲ್ಲಿ ಅಂದರೆ 24 ವರ್ಷದ ಹಿಂದೆ ಕರ್ನಾಟಕಕ್ಕೆ ಬಂದಾಗ ಇಲ್ಲಿನ ವೇದ ಪಂಡಿತರೊಬ್ಬರು ಹೇಳಿದ ಮಾತು “ವೇದಾಧ್ಯಯನ ಬರೇ ವ್ಯರ್ಥ, ಶಾಲೆಯಲ್ಲಿ ಮಕ್ಕಳು ನಾಲ್ಕಕ್ಷರ ಓದಿದರೆ ಉದ್ಯೋಗ ಮಾಡಬಹುದು. ವೇದ ಓದಿದರೆ ಏನು ಪ್ರಯೋಜನ?” ಎಂದಿದ್ದರು. ಅದು ಈಗಲೂ ನನ್ನ ಕರುಳಿನಲ್ಲಿ ನೋಯುತ್ತಿದೆ. ಆದರೆ ಒಂದು ಗಮನಿಸಿ. ಕೇವಲ 12 ವರ್ಷ ಸಾಂಗ ವೇದಾಧ್ಯಯನ ಒಬ್ಬನು ನಿಷ್ಠೆಯಿಂದ ಮಾಡಿದರೆ ಅವನಿಗೆ ಇಹಜೀವನದ ಏನಕ್ಕೆಲ್ಲವೂ ಪ್ರಾಪ್ತಿ ಖಂಡಿತ. ನಂತರ ಮುಮುಕ್ಷತ್ವವೂ ಸಿದ್ಧ. ಆದರೆ ಇಪ್ಪತ್ತು ವರ್ಷ ಓದಿ ಡಿಗ್ರಿ ತೆಗೆದುಕೊಂಡವನಿಗೆ ಯಾವುದಾದರೂ ಕಂಪೆನಿಯ ಜೀತ ಮಾತ್ರಾವೆಂಬುದು ಸತ್ಯ. ಇದನ್ನರಿತುಕೊಳ್ಳಿರಿ ಎಂದು ತಿಳಿಸುತ್ತಾ ಈ ಲೇಖನದ ಕುರಿತೆರಡು ಮಾತನ್ನು ವಿದ್ವಾಂಸರ ಚರಣಕಮಲದಲ್ಲಿಟ್ಟು ವಿರಮಿಸುತ್ತೇನೆ.
Reviews
There are no reviews yet.